ಸುಳ್ಯ: ಸುಳ್ಯ ಶ್ರೀರಾಮ ಪೇಟೆಯ ಶ್ರೀರಾಮ ಮಂದಿರದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಭಜನೋತ್ಸವ ಫೆ.25 ರಿಂದ 28ರ ತನಕ ವಿಜ್ರಂಭಣೆಯಿಂದ ನಡೆಯಲಿದೆ. ಬ್ರಹ್ಮಶ್ರಿ ವೇದಮೂರ್ತಿ ಮಧೂರು ರಾಜೇಶ ಸರಳಾಯ ಅವರ ನೇತೃತ್ವದಲ್ಲಿ ಶ್ರೀ ಮಹಾಗಣಪತಿ, ಶ್ರೀ ಮೂಕಾಂಬಿಕಾ, ಶ್ರೀ ಸೀತಾ ಲಕ್ಷ್ಮಣ ಆಂಜನೇಯ ಸಮೇತ ಶ್ರೀರಾಮ ದೇವರ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ
ಭಜನೋತ್ಸವ, ಧಾರ್ಮಿಕ ಉಪನ್ಯಾಸ, ಸಾಂಸ್ಕೃತಿಕ ಸಂಭ್ರಮ ನಡೆಯಲಿದೆ.
ಫೆ.25 ರಂದು ಪೂ.8ರಿಂದ ಗಣಪತಿ ಹವನವಾಗಿ ಪೂ.9ಕ್ಕೆಉಗ್ರಾಣ ತುಂಬುವುದು, ಬೆಳಗ್ಗೆ 10ರಿಂದ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಬಳಿಯಿಂದ ಹಸಿರುವಾಣಿ ಮೆರವಣಿಗೆ ಮುಖ್ಯ ರಸ್ತೆಯ ಮೂಲಕ ಸಾಗಿ ಬರಲಿದೆ. ಬಳಿಕ ಕ್ಷೇತ್ರದಲ್ಲಿ – ಪುಣ್ಯಾಹ, ಜೀವೋದ್ವಾಸನೆ, ಬಾಲಾಲಯದಲ್ಲಿ ದೇವರ ಸ್ಥಾಪನೆ, ಜೀವ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5ರಿಂದ ತಂತ್ರಿಗಳಿಗೆ ಪೂರ್ಣಕುಂಭ ಸ್ವಾಗತ ನೀಡಲಾಗುಗುವುದು.
ಬಳಿಕ ತೋರಣ ಮುಹೂರ್ತ, ಸಾಮೂಹಿಕ ಪ್ರಾರ್ಥನೆ, ಸ್ಥಳಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ದಿಕ್ಪಾಲಕ ಬಲಿ, ಪ್ರಾಯಶ್ಚಿತ ಹೋಮ, ಜೀವೋದ್ವಾಸನೆ, ಶಯ್ಯಾಗಮನ, ನೇತ್ರೋನ್ಮಿಲನ, ಶಯ್ಯಪೂಜೆ, ಶಯನ, ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ 6 ರಿಂದ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಧರ್ಮದರ್ಶಿ ಮಂಡಳಿಯ ಅಧ್ಯಕ್ಷ ಉಪೇಂದ್ರ ಪ್ರಭು ಕೆ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾ ಮಠದ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ ಆಶೀರ್ವಚನ ನೀಡುವರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸುವರು. ಮಹಾ ದ್ವಾರವನ್ನು ಎ.ಒಎಲ್.ಇ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಅವರು ಉದ್ಘಾಟಿಸುವರು. ಮಧ್ವಾಧೀಶ ವಿಠಲದಾಸ ನಾಮಾಂಕಿತರಾದ ರಾಮಕೃಷ್ಣ ಕಾಟುಕುಕ್ಕೆ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಪದ್ಮಶ್ರೀ ಪುರಸ್ಕೃತರಾದ ಡಾ. ಗಿರೀಶ್ ಭಾರದ್ವಾಜ್, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ನಾಗೇಶ್ ಪಿ ಉಪಸ್ಥಿತರಿರುವರು. ಬಳಿಕ ರಾಮಕೃಷ್ಣ ಕಾಟುಕುಕ್ಕೆ ಮತ್ತು ಬಳಗದವರಿಂದ ದಾಸ ಭಕ್ತಿಗಾನ ಮಂಜರಿ ಕಾರ್ಯಕ್ರಮ ನಡೆಯಲಿದೆ.
ಫೆ.26 ರಂದು ಬೆಳಗ್ಗೆ 7ರಿಂದ ಕವಾಟೋದ್ಘಾಟನೆ, ಗಣಪತಿ ಹವನ, ಅಷ್ಟೋತ್ತರ ಶತಕಲಶ ಪ್ರತಿಷ್ಠೆ, ನವಕ ಪ್ರತಿಷ್ಠೆ ಪೂ.11ಕ್ಕೆ ಶ್ರೀ ದೇವರ ಪ್ರತಿಷ್ಠೆ, 11.17ಕ್ಕೆ ವೃಷಭ ಲಗ್ನದ ಶುಭಮುಹೂರ್ತದಲ್ಲಿ ಶ್ರೀ ದೇವರಿಗೆ ಬ್ರಹ್ಮಕಲಶಾಭಿಷೇಕ ನಡೆಯಲಿದೆ.ಮಂತ್ರಾವಾಹನೆ, ನವಕಾಭಿಷೇಕ,ಕಲಶಾಭಿಷೇಕ, ಮಹಾಪೂಜೆ, ನಿತ್ಯ ನೈಮಿತ್ತಿಕ ಪ್ರಾರ್ಥನೆ, ಪ್ರಸಾದ ವಿತರಣೆ ಅನ್ನ ಸಂತರ್ಪಣೆ ನಡೆಯಲಿದೆ.
ಸಂಜೆ ಗಂಟೆ 5.00 ರಿಂದ
ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಿಂದ ತಾಲೂಕಿನ ವಿವಿಧ ಭಜನಾ ಮಂಡಳಿಯವರಿಂದ ಆಕರ್ಷಕ ಕುಣಿತ ಭಜನೆಯೊಂದಿಗೆ ಅದ್ದೂರಿ ಭಜನಾ ಮೆರವಣಿಗೆ ನಡೆಯಲಿದೆ.
ಸಂಜೆ 6 ರಿಂದ ನಾಗಸನ್ನಿಧಿಯಲ್ಲಿ ಆಶ್ಲೇಷ ಬಲಿ ಪೂಜೆ, ತಾಯಂಬಕ, ದುರ್ಗಾ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ರಾತ್ರಿ 7.30ರಿಂದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ
ಯಕ್ಷ- ಗಾನ- ನಾಟ್ಯ ವೈಭವ ಕಾರ್ಯಕ್ರಮ ನಡೆಯಲಿದೆ.
ಫೆ.27 ರಂದು ಬೆಳಗ್ಗೆ 8ರಿಂದ 48 ತೆಂಗಿನಕಾಯಿ ಗಣಪತಿ ಹವನ, ಬಳಿಕ ಚಂಡಿಕಾಯಾಗ, ಲಕ್ಷ ತುಳಸಿ ಅರ್ಚನೆ, ಮಹಾಪೂಜೆ, ಮಹಾ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ.
ಸಂಜೆ 6 ರಿಂದ ಸಮಾರೋಪ ಸಮಾರಂಭವು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೃಷ್ಣ ಕಾಮತ್ ಅರಂಬೂರು ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಎಸ್.ಅಂಗಾರ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಡಾ.ರೇಣುಕಾಪ್ರಸಾದ್ ಕೆ.ವಿ, ಗ್ರೀನ್ ಹೀರೋ ಆಫ್ ಇಂಡಿಯಾ ಡಾ.ಆರ್.ಕೆ.ನಾಯರ್, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸೀತಾರಾಮ ರೈ ಸವಣೂರು, ಮಂಜುನಾಥೇಶ್ವರ ಭಜನಾ ಪರಿಷತ್ನ ರಾಜ್ಯಾಧ್ಯಕ್ಷ ಬಾಲಕೃಷ್ಣ ಪುತ್ಯ ಉಪಸ್ಥಿತರಿರುವರು.ರಾತ್ರಿ 7ರಿಂದ ಖ್ಯಾತ ಕಲಾವಿದರಿಂದ ಭಕ್ತಿ ಗಾನ ಸುಧೆ ಮತ್ತು ವಾದ್ಯ ಸಂಗೀತ ಜುಗಲ್ ಬಂಧಿ ನಡೆಯಲಿದೆ.
ಫೆ.28 ಬೆಳಿಗ್ಗೆ 6ರಿಂದ ಸಂಜೆ 6ರ ತನಕ ತಾಲೂಕಿನ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ ನಡೆಯಲಿದೆ.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೃಷ್ಣ ಕಾಮತ್ ಅರಂಬೂರು ಹಾಗೂ ಪ್ರಧಾನ ಕಾರ್ಯದರ್ಶಿ ನಾರಾಯಣ ಕೇಕಡ್ಕ ತಿಳಿಸಿದ್ದಾರೆ.
ಸುಮಾರು 80 ವರ್ಷಗಳಿಂದ ಸುಳ್ಯ ನಗರದ ಹೃದಯ ಭಾಗದ ಶ್ರೀರಾಮ ಪೇಟೆಯ ಶ್ರೀರಾಮ ಮಂದಿರದಲ್ಲಿ ಶ್ರೀರಾಮನನ್ನು ಆರಧಿಸಿಕೊಂಡು ಬರಲಾಗುತ್ತಿದೆ. ಪ್ರತಿ ವಾರ ಭಜನೆ ಹಾಗೂ ವಾರ್ಷಿಕವಾಗಿ ಏಕಾಹ ಭಜನೆ ಭಜನೆಯನ್ನು ಹಮ್ಮಿಕೊಂಡು ಬರುವುದು, ರೂಢಿಯಾಗಿದೆ.
1943ರಲ್ಲಿ ಹಂಚಿನ ಚಾವಣೆ ಕಟ್ಟಡ ನಿರ್ಮಾಣವಾಗಿತ್ತು. 1965ರಲ್ಲಿ ಗೋಪುರ ನಿರ್ಮಾಣಗೊಂಡಿತು. 1990 ರಲ್ಲಿ ನಾಗದೇವರ ಪ್ರತಿಷ್ಠೆಯಾಗಿ ನಂತರ ದೈವಜ್ಞರ ಸೂಚನೆಯಂತೆ ಸಾನಿಧ್ಯ ಶಕ್ತಿಯಾಗಿ ಶ್ರೀ ಮಹಾಗಣಪತಿ, ಶ್ರೀ ಮೂಕಾಂಬಿಕೆ, ಸೀತಾಲಕ್ಷ್ಮಣ ಆಂಜನೇಯ ಸಮೇತ ಶ್ರೀ ರಾಮ ದೇವರ ಮೂರ್ತಿಯನ್ನು ಗರ್ಭಗುಡಿಯಲ್ಲಿ ಪ್ರತಿಷ್ಠೆ ಮಾಡಲಾಯಿತು. ಇದೀಗ ಶ್ರೀ ಮಹಾಗಣಪತಿ, ಶ್ರೀ ಮೂಕಾಂಬಿಕಾ, ಶ್ರೀ ಸೀತಾ ಲಕ್ಷ್ಮಣ ಅಂಜನೇಯ ಸಮೇತ ಶ್ರೀ ರಾಮ ದೇವರ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ವಿಜ್ರಂಭಣೆಯಿಂದ ನಡೆಯಲಿದ್ದು ಭರದ ಸಿದ್ಧತೆಗಳು ನಡೆಯುತಿದೆ.