ಸುಳ್ಯ:ಕನ್ನಡ ಬೆಳಗುವ ಕಿಚ್ಚು ಕನ್ನಡದ ಎಲ್ಲರಲ್ಲಿಯೂ ಬರಬೇಕು. ಕನ್ನಡದ ಶ್ರೀಮಂತಿಕೆಗೆ ಎಲ್ಲಿಯೂ ಕೊರತೆ ಇಲ್ಲ. ಆದರೆ ಕನ್ನಡದ ಅಭಿಮಾನಕ್ಕೆ ಕೊರತೆ ಇದೆ. ಇದರಿಂದ ಕನ್ನಡ ಭಾಷೆಗೆ ತೊಡಕಾಗಿದೆ ಎಂದು ಸುಳ್ಯ ನ.ಪಂ. ಅದ್ಯಕ್ಷ ವಿನಯಕುಮಾರ್ ಕಂದಡ್ಕ ಹೇಳಿದರು.ರಾಷ್ಟ್ರೀಯ ಹಬ್ಬಗಳ ದಿನಾಚರಣೆ ಸಮಿತಿ ಸುಳ್ಯ ತಾಲೂಕು ಇದರ ಆಶ್ರಯದಲ್ಲಿ ಮಂಗಳವಾರ ಸುಳ್ಯ ಸರಕಾರಿ ಪದವಿ ಪೂರ್ವ

ಕಾಲೇಜು ಮೈದಾನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದ ಅದ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡಕ್ಕೆ ಅನ್ಯಭಾಷೆಗಳಿಂಧ ತೊಡಕಾಗಿಲ್ಲ. ಕನ್ನಡ ಮಾತನಾಡುವ ನಮ್ಮಿಂದಲೇ ಅಪಾಯ ಎದುರಾಗಿದೆ. ಆಂಗ್ಲ ವ್ಯಾಮೋಹ ಬಿಟ್ಟು ಮನೆಯಲ್ಲಿ ಕನ್ನಡ ಮಾತಾಡಬೇಕು. ಕನ್ನಡಕ್ಕೆ ನಾವೇ ವಿರೋಧಿಗಳಾಗಬಾರದು ಎಂದರು.
ತಹಸೀಲ್ದಾರ್ ಕು.ಅನಿತಾಲಕ್ಷ್ಮೀ ಕನ್ನಡ ಧ್ವಜಾರೋಹಣ ನೆರವೇರಿಸಿ ಬಳಿಕ ದ್ವಜ ವಂದನೆ ಸ್ವೀಕರಿಸಿ ಮಾತನಾಡಿ “ಕನ್ನಡ ನಮ್ಮೆಲ್ಲರ ಜೀವದ ಭಾಷೆ. ಭಾಷೆಯ ಗಣತೆಯನ್ನು ಎಲ್ಲರೂ ಕಾಪಾಡುವುದರ ಜತೆಗೆ ಕನ್ನಡದ ಸಂಪ್ರದಾಯ – ಸಂಸ್ಕೃತಿ ಯನ್ನು ಮಕ್ಕಳಿಗೆ ತಿಳಿಸುವ ಕೆಲಸ ಮಾಡೋಣ. ಕನ್ನಡವನ್ನು ಪ್ರೀತಿಸುವುದರ ಜತೆಗೆ ಇತರ ಭಾಷೆಯನ್ನು ಗೌರವಿಸೋಣ” ಎಂದು ಹೇಳಿದರು. ತಾಲೂಕು ಕಸಾಪ ಅಧ್ಯಕ್ಷ ಚಂದ್ರಶೇಖರ ಪೇರಾಲು ಮಾತನಾಡಿ, ತಾಲೂಕಿನಲ್ಲಿ ಕನ್ನಡಕ್ಕಾಗಿ ಸೇವೆ ಸಲ್ಲಿಸಿದವರು ಹಲವರಿದ್ದಾರೆ. ಈ ಹಿಂದೆ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಕನ್ನಡಕ್ಕಾಗಿ ಸೇವೆ ಸಲ್ಲಿಸಿದವರಿಗೆ ತಾಲೂಕು ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿತ್ತು. ಆದರೆ ಈಗ ಅದನ್ನು ನಿಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಕನ್ನಡಕ್ಕಾಗಿ ದುಡಿದವರಿಗೆ ತಾಲೂಕು ಮಟ್ಟದಲ್ಲಿ ಪ್ರಶಸ್ತಿ ನೀಡುವ ಕೆಲಸ ಆಗಬೇಕು” ಎಂದು ವಿನಂತಿಸಿದರು.
ಸುಳ್ಯ ನ.ಪಂ. ಮಾಜಿ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ನ.ಪಂ. ಸದಸ್ಯ ಬಾಲಕೃಷ್ಣ ಭಟ್ ಕೊಡೆಂಕಿರಿ, ಶಿಕ್ಷಣಾಧಿಕಾರಿ ಎಸ್.ಪಿ. ಮಹಾದೇವ, ನ.ಪಂ. ಮುಖ್ಯಾಧಿಕಾರಿ ಸುಧಾಕರ್, ಸಿಡಿಪಿಒ ರಶ್ಮಿ ಅಶೋಕ್ ನೆಕ್ರಾಜೆ, ಸುಳ್ಯ ಸರಕಾರಿ ಪದವಿಪೂರ್ವ ಕಾಲೇಜು ಪ್ರಿನ್ಸಿಪಾಲ್ ಮೋಹನ್ ಗೌಡ ಬೊಮ್ಮೆಟ್ಟಿ, ವೈಸ್ ಪ್ರಿನ್ಸಿಪಾಲ್ ಪ್ರಕಾಶ ಮೂಡಿತ್ತಾಯ, ಸರಕಾರಿ ನೌಕರರ ಸಂಘದ ಅಧ್ಯಕ್ಷ ತೀರ್ಥರಾಮ ಹೊಸೊಳಿಕೆ, ಸುಳ್ಯ ರೇಂಜರ್ ಗಿರೀಶ್ ಆರ್ ವೇದಿಕೆಯಲ್ಲಿದ್ದರು.

ಎಸ್.ಎಸ್.ಎಲ್.ಸಿ.ಯಲ್ಲಿ ಕನ್ನಡ ವಿಷಯದಲ್ಲಿ ೧೨೫ರಲ್ಲಿ ೧೨೫ ಅಂಕಗಳಿಸಿದ ೬೪ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಎನ್ ಸ್ವಾಗತಿಸಿದರು. ಶಿಕ್ಷಣ ಸಂಯೋಜಕಿ ನಳಿನಿ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಶಿಕ್ಷಣ ಸಂಯೋಜಕ ಚಂದ್ರಶೇಖರ ಹಾಗೂ ಮಮತಾ ಕಾರ್ಯಕ್ರಮ ನಿರೂಪಿಸಿದರು.ಪೋಲೀಸ್, ಗೃಹರಕ್ಷಕ, ಎನ್.ಸಿ.ಸಿ., ಸ್ಕೌಟ್ ಗೈಡ್ಸ್, ಸೇವಾದಳ ಸಹಿತ ನಗರದ ವಿವಿಧ ಶಾಲಾ ವಿದ್ಯಾರ್ಥಿಗಳು ಪಥ ಸಂಚಲನದಲ್ಲಿ ಭಾಗವಹಿಸಿದರು. ಸಭಾ ಕಾರ್ಯಕ್ರಮ ದ ಬಳಿಕ ಮೈದಾನದಲ್ಲಿ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು.