ಮಂಗಳೂರು: ಜಿಲ್ಲಾಡಳಿತದ ವತಿಯಿಂದ ಇಲ್ಲಿನ ನೆಹರೂ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ 67ನೇ ಕನ್ನಡ ರಾಜ್ಯೋತ್ಸವದಲ್ಲಿ ಇಂಧನ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸುನಿಲ್ ಕುಮಾರ್ ಅವರು ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ, ಸಂದೇಶ ನೀಡಿದರು. ಸಾವಿರಾರು ವರ್ಷಗಳ ಸುಧೀರ್ಘ ಪರಂಪರೆಯಲ್ಲಿ ಕನ್ನಡ ಭಾಷೆ ತನ್ನ ಸ್ವರೂಪವನ್ನು ಹಾಗೂ ಸಮಾಜವನ್ನು
ಸಶಕ್ತವಾಗಿ ಬೆಳೆಸಿದೆ. ಕನ್ನಡ ಭಾಷೆ ನಮ್ಮನ್ನು ನಾಗರಿಕರನ್ನಾಗಿಸಿದೆ, ಸುಸಂಸ್ಕೃತರನ್ನಾಗಿಸಿದೆ, ವಿವೇಕಿಗಳನ್ನಾಗಿಸಿದೆ. ವೈಜ್ಞಾನಿಕ ಮನೋಧರ್ಮ, ಸೂಕ್ಷ್ಮ ಸಂವೇದನೆ ಹೊಂದಿದ ನಮ್ಮ ಕವಿಗಳು ಹೊಸ ಬಗೆಯ ಅರಿವು, ಚಿಂತನೆಗಳನ್ನು ಕನ್ನಡ ಕಾವ್ಯಗಳಲ್ಲಿ ಸೊಗಸಾಗಿ ಅಭಿವ್ಯಕ್ತಿಸಿದ್ದಾರೆ.ಅಖಂಡ ಕರ್ನಾಟಕವನ್ನು ಕಟ್ಟಿದ ಇತಿಹಾಸವನ್ನು ಪ್ರತಿಯೊಬ್ಬರು ಅರಿಯಬೇಕಿದೆ. ಕನ್ನಡ ಭಾಷೆ ಎಂಬುದು ಕನ್ನಡಿಗರ ಭೌದ್ಧಿಕ ಸಂಪತ್ತು. ಅದು ಎಲ್ಲಾ ಸಂಪತ್ತಿಗಿಂತಲೂ ವಿಶೇಷ. ಕನ್ನಡಕ್ಕಾಗಿ ದುಡಿ, ಕನ್ನಡಕ್ಕಾಗಿ ಮಡಿ ಎಂಬ ಧ್ಯೇಯ ವಾಕ್ಯವನ್ನು ಸದಾ ಸ್ಮರಣೆಯಲ್ಲಿಟ್ಟುಕೊಂಡು ಕನ್ನಡದ ನುಡಿ ಹಬ್ಬ (ರಾಜ್ಯೋತ್ಸವ) ವನ್ನು ಸದಾ ಹಸಿರಾಗಿಸುವ ಕೈಂಕರ್ಯದಲ್ಲಿ ಎಲ್ಲರೂ ಕೈಜೋಡಿಸೋಣ ಎಂದರು.
ಮುಖ್ಯ ಅತಿಥಿಗಳಾಗಿ ಸಂಸದರಾದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಯು.ಟಿ. ಖಾದರ್ ಹಾಗೂ ಉಮನಾಥ್ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಹರೀಶ್ ಕುಮಾರ್, ಮಂಗಳೂರು ಮೇಯರ್ ಜಯಾನಂದ ಅಂಚನ್, ಉಪ ಮೇಯರ್ ಪೂರ್ಣಿಮಾ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಷ್ ಭಗವಾನ್ ಸೋನಾವಣೆ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಸೇರಿದಂತೆ ಅಧಿಕಾರಿಗಳು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಸಾಧಕರು ಹಾಗೂ ಸಂಘ ಸಂಸ್ಥೆಗಳಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ನಡೆಸಿಕೊಟ್ಟ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ಜನಮನ ಸೂರೆಗೊಂಡವು.