ಬೆಳ್ತಂಗಡಿ:ಜನರ ಜೀವನ ಮಟ್ಟ ಸುಧಾರಣೆ ಅಗತ್ಯತೆ ಮನಗಂಡು ರಾಜ್ಯಸಭಾ ನಿಧಿ ಬಳಸಲಾಗುವುದು ಎಂದು ರಾಜ್ಯಸಭಾ ಸಂಸದ, ಶ್ರಿ ಕ್ಷೇತ್ರ ಧರ್ಮಸ್ಥಳದ ಧರ್ಮಾದಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಹೇಳಿದರು.ಅವರು ಸೋಮವಾರ ರಾಜ್ಯಸಭಾ ಸಂಸದರಾದ ಡಾ. ವೀರೇಂದ್ರ ಹೆಗ್ಗಡೆಯವರ ಪ್ರದೇಶಾಭಿವೃದ್ಧಿ ನಿಧಿಯಡಿ ಮಂಜೂರುಗೊಂಡಿರುವ ರೂ. 2 ಕೋ.ರೂ. ಅನುದಾನದಡಿ
ಬೆಳ್ತಂಗಡಿ ನಗರದ ಕೆಇಬಿ-ರೆಂಕೆದಗುತ್ತು- ಮಲ್ಲೊಟ್ಟು ಸಂಪರ್ಕಿಸುವ ರಸ್ತೆಯ ಅಗಲೀಕರಣ- ಡಾಂಬರೀಕರಣ ಮತ್ತು ಒಳಚರಂಡಿ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ಬೀದರ್ ಜಿಲ್ಲೆಯ ಜನರ ಜೀವನ ಸುಧಾರಣೆ ಅಗಬೇಕು ಎಂದು ನನ್ನ ರಾಜ್ಯಸಭಾ ಪ್ರದೇಶಾಭಿವೃದ್ಧಿ ನಿಧಿಯಿಂದ ಬೀದರ್ ಜಿಲ್ಲೆಗೆ ಹೈನುಗಾರಿಕೆಗೆ 10 ಕೋಟಿ ರೂ. ಬಳಕೆ ಮಾಡಿದ್ದು ಇದರಿಂದ ನಿತ್ಯ 18 ಸಾವಿರ ಲೀಟರ್ ಉತ್ಪತ್ತಿಯಾಗುತ್ತಿದ್ದ ಹಾಲು ಪ್ರಸ್ತುತ ಒಂದು ಲಕ್ಷದ ನಲುವತ್ತು ಸಾವಿರ ಲೀಟರ್ ಹಾಲು ಉತ್ಪತ್ತಿಯಾಗುತ್ತಿದೆ. ಇದರಿಂದ ಅಲ್ಲಿನ ಜನರ ಜೀವನಮಟ್ಟ ಸುಧಾರಿಸಿದೆ ಎಂದರು. ಬೆಳ್ತಂಗಡಿ ಶಾಸಕರ, ಪಟ್ಟಣ ಪಂಚಾಯಿತಿ ಅಧ್ಯಕ್ಷರ ,ಸದಸ್ಯರ ಬೇಡಿಕೆಯಂತೆ ಜನರ ಅನುಕೂಲಕ್ಕಾಗಿ ಈ ರಸ್ತೆಗೆ 2 ಕೋಟಿ ರೂ. ಅನುದಾನ ನೀಡಲಾಗಿದೆ ಎಂದರು.
ಶಾಸಕ ಹರೀಶ್ ಪೂಂಜ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉದ್ಯಮಿ ಶಶಿಧರ ಶೆಟ್ಟಿ ಬರೋಡ, ಬೆಳ್ತಂಗಡಿ ಪ.ಪಂ.ಅಧ್ಯಕ್ಷ ಜಯಾನಂದ ಗೌಡ, ಉಪಾಧ್ಯಕ್ಷೆ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ,ಧ. ಗ್ರಾ. ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್. ಎಸ್.,ಸಿರಿ ಸಂಸ್ಥೆ ಟ್ರಸ್ಟಿ ರಾಜೇಶ್ ಪೈ ಉಜಿರೆ, ಪ.ಪಂ. ಮುಖ್ಯಾಧಿಕಾರಿ ರಾಜೇಶ್, ಸಿರಿ ಸಂಸ್ಥೆ ಸಿಇಒ ಪ್ರಸನ್ನ, ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎಸ್. ಜನಾರ್ದನ್ ಪ್ರಸ್ತಾವಿಸಿ, ಸ್ವಾಗತಿಸಿದರು.ಸಿರಿ ಗೋದಾಮು ವಿಭಾಗದ ಮ್ಯಾನೇಜರ್ ಜೀವನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.





