ಮಡಿಕೇರಿ: ಕೊಡಗಿನ ಪ್ರಮುಖ ಪ್ರವಾಸಿ ತಾಣವಾದ ಮಡಿಕೇರಿಯ ರಾಜಸೀಟು ಉದ್ಯಾನವನದಲ್ಲಿ ಪ್ರಸಕ್ತ ಸಾಲಿನ ‘ಫಲಪುಷ್ಪ ಪ್ರದರ್ಶನ’ವನ್ನು ಜನವರಿ 26 ರಿಂದ ಮೂರು ದಿನಗಳ ಕಾಲ ಆಯೋಜಿಸಲು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾಜಸೀಟು ಅಭಿವೃದ್ಧಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಗೆ ಭೇಟಿ ನೀಡುವ ಪ್ರತೀ ಪ್ರವಾಸಿಗರು
ರಾಜಾಸೀಟಿಗೆ ಭೇಟಿ ನೀಡಲಿದ್ದಾರೆ. ಆದ್ದರಿಂದ ರಾಜಾಸೀಟು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕಿದೆ. ಆ ನಿಟ್ಟಿನಲ್ಲಿ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವುದು ಮತ್ತಿತರ ಸಂಬಂಧ ವಿಶೇಷ ಗಮನಹರಿಸುವಂತೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ರಾಜಾಸೀಟು ಮಾರ್ಗದ ರಸ್ತೆಯನ್ನು ಸರಿಪಡಿಸಬೇಕು. ರಾಜಾಸೀಟು ಉದ್ಯಾನವನದಲ್ಲಿ ನೀರು ಪೂರೈಕೆ, ಲೈಟಿಂಗ್ ಕೆಲಸವನ್ನು ತ್ವರಿತವಾಗಿ ಮಾಡಬೇಕು, ರಾಜಾಸೀಟು ಉದ್ಯಾನವನದ ಕಾರಂಜಿಯನ್ನು ಉತ್ತಮವಾಗಿ ನಿರ್ವಹಣೆ ಮಾಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಫಲಪುಷ್ಪ ಪ್ರದರ್ಶನ ಏರ್ಪಡಿಸುವ ಸಂಬಂಧ ಕೊಡಗು ಜಿಲ್ಲೆಯ ಕಲೆ, ಸಂಸ್ಕೃತಿ, ಪರಿಸರ ಮತ್ತಿತರ ವಿಷಯಗಳ ಕುರಿತು ಹಲವು ಮಾಹಿತಿ ನೀಡಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಚ್.ಆರ್.ಯೋಗೇಶ್ ಅವರು ಮನವಿ ಮಾಡಿದರು.
ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕಿ ಅನಿತಾ ಭಾಸ್ಕರ್ ,ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮುತ್ತಪ್ಪ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಸಿದ್ದೇಗೌಡ, ಕೆಆರ್ಐಡಿಎಲ್ ಕಾರ್ಯಪಾಲಕ ಎಂಜಿನಿಯರ್ ಸುರೇಶ್, ಜಿ.ಪಂ.ಸಹಾಯಕ ಕಾರ್ಯದರ್ಶಿ ಜೀವನ್ ಕುಮಾರ್, ನಗರಸಭೆಯ ಪರಿಸರ ಎಂಜಿನಿಯರ್ ಸೌಮ್ಯ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಸಚಿನ್ ಇತರರು ಇದ್ದರು.












