ಸುಳ್ಯ:ಸರಕಾರ ಘೋಷಣೆ ಮಾಡಿದ ಸಾಲ ಮನ್ನಾ ಹಣ ಅರ್ಹರಾದ ಎಲ್ಲಾ ರೈತರಿಗೂ ನೀಡಿ. ಅಡಿಕೆ ಹಳದಿ ರೋಗದಿಂದ ಕೃಷಿ ನಾಶವಾದ ಕೃಷಿಕರಿಗೆ ಸೂಕ್ತ ಪರಿಹಾರ ನೀಡಬೇಕು, ಅವರ ಸಾಲ ಸಂಪೂರ್ಣ ಮನ್ನಾ ಮಾಡಬೇಕು ಎಂದು ಸುಳ್ಯ ತಾಲೂಕು ರೈತ ಸಂಘದ ಪದಾಧಿಕಾರಿಗಳು ಸರಕಾರವನ್ನು ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ಗೌರವಾಧ್ಯಕ್ಷ ನೂಜಾಲು ಪದ್ಮನಾಭ ಗೌಡ’ ಸಾಲ ಮನ್ನಾ
ಘೋಷಣೆ ಮಾಡಿದರೂ ಇನ್ನಿಲ್ಲದ ಷರತ್ತುಗಳನ್ನು ವಿಧಿಸಿದ ಕಾರಣ ಹಲವು ಮಂದಿ ಕೃಷಿಕರು ಸಾಲಮನ್ನಾ ಪಡೆಯುವುದರಲ್ಲಿ ವಿಫಲರಾಗಿದ್ದಾರೆ. ಸಾಲ ಪಡೆದ ಅರ್ಹರಾದ ಎಲ್ಲಾ ರೈತರಿಗೂ ಅದರ ಪ್ರಯೋಜನ ಸಿಗದಿದ್ದರೆ ಸಾಲಮನ್ನಾ ಯೋಜನೆ ಜಾರಿಯಿಂದ ಏನು ಪ್ರಯೋಜನ ಎಂದು ಪ್ರಶ್ನಿಸಿದ ಅವರು ಎಲ್ಲಾ ತಾಂತ್ರಿಕ ಸಮಸ್ಯೆ ಸರಿಪಡಿಸಿ ಅರ್ಹರಾದವರ ಪಟ್ಟಿ ಗ್ರೀನ್ ಲಿಸ್ಟ್ಗೆ ಸೇರ್ಪಡೆಯಾಗಿ ಒಂದು ವರ್ಷ ಆದರೂ ಸಾಲಮನ್ನಾ ಬಂದಿಲ್ಲ ಎಂದು ಅವರು ಹೇಳಿದರು. ಸುಳ್ಯ ತಾಲೂಕಿನಲ್ಲಿ 700 ಕ್ಕೂ ಅಧಿಕ ಮಂದಿ ಗ್ರೀನ್ ಲಿಸ್ಟ್ನಲ್ಲಿದ್ದರೂ ಸಾಲಮನ್ನಾ ಸೌಲಭ್ಯ ದೊರಕಿಲ್ಲ ಎಂದು ಅವರು ಹೇಳಿದರು. ಎಲ್ಲರಿಗೂ ಸೌಲಭ್ಯ ದೊರೆಯದಿದ್ದರೆ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದರು. ರಬ್ಬರ್, ತೆಂಗು, ಕರಿಮೆಣಸು ಸೇರಿ ಬಹುತೇಕ ಕೃಷಿಯು ಉತ್ಪಾದನಾ ವೆಚ್ಚವೂ ಸಿಗದೆ ನಷ್ಟದಲ್ಲಿದೆ. ಆದುದರಿಂದ ಉತ್ಪಾದನಾ ವೆಚ್ಚ ಹಾಗು ಲಾಭದಾಯಕವಾಗುವ ನೆಲೆಯ ದರ ಸಿಗುವಂತೆ ಬೆಂಬಲ ಬೆಲೆ ನೀಡಿ ಸರಕಾರ ಮಾರುಕಟ್ಟೆಯನ್ನು ಒದಗಿಸದಬೇಕು ಎಂದು ಅವರು ಒತ್ತಾಯಿಸಿದರು.

ಅಡಿಕೆ ಹಳದಿ ರೋಗಕ್ಕೆ ಪರಿಹಾರ ನೀಡಿ:
ರೈತ ಸಂಘದ ತಾಲೂಕು ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು ಮಾತನಾಡಿ
ಸುಳ್ಯ ತಾಲೂಕಿನ 15 ಗ್ರಾಮಗಳಲ್ಲಿ ಅಡಿಕೆ ಹಳದಿ ರೋಗದಿಂದ ಕೃಷಿ ನಾಶವಾಗಿದೆ. ಆದುರಿಂದ ಕೃಷಿ ನಾಶ ಉಂಟಾಗಿ ನಷ್ಟ ಅನುಭವಿಸಿದ ಕೃಷಿಕರ ಸಾಲವನ್ನೂ ಸಂಪೂರ್ಣ ಮನ್ನಾ ಮಾಡಬೇಕು ಮತ್ತು ಪರಿಹಾರ ನೀಡಬೇಕು. ಪರ್ಯಾಯ ಕೃಷಿ ನಡೆಸಲು ನಿಬಡ್ಡಿಯಲ್ಲಿ 10 ಲಕ್ಷ ರೂ ದೀರ್ಘಾವಧಿ ಸಾಲ ನೀಡಬೇಕು ಎಂದು ಒತ್ತಾಯಿಸಿದರು. ರೈತರ ಬೇಡಿಕೆ ಈಡೇರಿಸುವ ಸರಕಾರದ ಬೆನ್ನ ಹಿಂದೆ ರೈತ ಸಂಘ ನಿಲ್ಲಲಿದೆ ಎಂದು ಅವರು ಹೇಳಿದರು.
ತಾಲೂಕು ರೈತ ಸಂಘದ ಉಪಾಧ್ಯಕ್ಷ ತೀರ್ಥರಾಮ ಉಳುವಾರು ಮಾತನಾಡಿ’ ಚುನಾವಣಾ ಸಂದರ್ಭದಲ್ಲಿ ಕೋವಿಗಳನ್ನು ಡಿಪಾಸಿಟ್ ಮಾಡುವುದು ಗ್ರಾಮೀಣ ಕೃಷಿಕರಿಗೆ ದೊಡ್ಡ ಸಮಸ್ಯೆ ಉಂಟು ಮಾಡುತ್ತದೆ. ಆದುದರಿಂದ ಅಪರಾಧ ಹಿನ್ನಲೆಯುಳ್ಳವರ ಕೋವಿಗಳನ್ನು ಮಾತ್ರ ಡಿಪಾಸಿಟ್ ಇಡುವಂತೆ ಮಾಡಬೇಕು.ಸಾಮಾನ್ಯ ರೈತರಿಗೆ ಕೋವಿ ಡಿಫಾಸಿಟ್ ಮಾಡುವುದರಿಂದ ವಿನಾಯತಿ ನೀಡಬೇಕು ಎಂದು ಒತ್ತಾಯಿಸಿದರು. 90 ರೂ ಇದ್ದ ಕೋವಿ ನವೀಕರಣ ಶುಲ್ಕವನ್ನು 2500 ಕ್ಕೆ ಏರಿಸಿರುವುದು ರೈತರಿಗೆ ಹೊರೆಯಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ದಿವಾಕರ ಪೈ, ತಾಲೂಕು ಸಂಘಟನಾ ಸಂಚಾಲಕ ಸೆಬಾಸ್ಟಿಯನ್ ಮಡಪ್ಪಾಡಿ ಉಪಸ್ಥಿತರಿದ್ದರು.