ಮಡಿಕೇರಿ: ಕೊಡಗು ಜಿಲ್ಲೆಗೆ ತಂಪೆರೆದು ವರುಣಾಗಮನವಾಗಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆಯಾಗಿದೆ. ಬುಧವಾರ ಮಧ್ಯಾಹ್ನದಿಂದ ಸಂಜೆಯವರೆಗೆ ಜಿಲ್ಲೆಯ ಹಲವು ಕಡೆಗಳಲ್ಲಿ ಸಾಧಾರಣ ಮಳೆಯಾಗಿದೆ.
ಬುಧವಾರ ಮಧ್ಯಾಹ್ನ ಮಡಿಕೇರಿ ತಾಲೂಕಿನ ಮೂರ್ನಾಡು ಸಮೀಪದ ಕಿಗ್ಗಾಲುವಿನಲ್ಲಿ ಉತ್ತಮ ಮಳೆಯಾಗಿದೆ. ಜಿಲ್ಲೆಯ
ಕಾಕೋಟು ಪರಂಬು ಪ್ರದೇಶಗಳಲ್ಲಿ ಕೂಡ ಸಾಧಾರಣ ಮಳೆ ಸುರಿದಿದೆ.ಕುಶಾಲನಗರ, ಪಿರಿಯಾಪಟ್ಟಣದ ನಡುವೆ ಹಲವು ಕಡೆಗಳಲ್ಲಿ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಮಾರ್ಚ್ 20ರ ನಂತರ ಮಡಿಕೇರಿಯ ಹಲವು ಕಡೆಗಳಲ್ಲಿ ಮಳೆಯಾಗುವ ಬಗ್ಗೆ ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದರು. ಇದೀಗ ನಿರೀಕ್ಷೆಗೂ ಮುನ್ನವೇ ಹಲವು ಪ್ರದೇಶಗಳಲ್ಲಿ ಮಳೆಯಾಗಿದೆ. ಹವಾಮಾನ ಮುನ್ಸೂಚನೆಗಳ ಪ್ರಕಾರ ರಾಜ್ಯದಲ್ಲಿ ಈ ಬಾರಿ ವಾಡಿಕೆಯಂತೆ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಮೇ ಜೂನ್ ನಡುವೆ ರಾಜ್ಯದಲ್ಲಿ ಮಳೆಗಾಲ ಶುರುವಾಗಲಿದ್ದು, ವ್ಯಾಪಕ ಮಳೆಯಾಗಲಿದೆ ಎಂದು ಹೇಳಲಾಗಿದೆ.
ಕರ್ನಾಟಕದಾದ್ಯಂತ ಒಣಹವೆ ಮುಂದುವರೆದಿದೆ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಉಷ್ಣಾಂಶ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಸುಳ್ಯದಲ್ಲಿ ಮೋಡ ಕವಿದ ವಾತಾವರಣ:
ಸುಳ್ಯದಲ್ಲಿ ಗುರುವಾರ ಬೆಳಗ್ಗಿನಿಂದ ಮೋಡ ಕವಿದ ವಾತಾವರಣ ಇದೆ. ಕಳೆದ ಕೆಲವು ದಿನಗಳಿಂದ ವಿಪರೀಪ ಸೆಕೆ ಇದ್ದು ಕೆಲವೊಮ್ಮೆ ಮೋಡ ಕವಿದ ವಾತಾವರಣ ಉಂಟಾಗುತ್ತಿದೆ.









