ಮಂಗಳೂರು: ಸಂಸದರ ಮನವಿ ಮೇರೆಗೆ ಕೇಂದ್ರ ರೈಲ್ವೇ ಮತ್ತು ಜಲಶಕ್ತಿ ಸಚಿವ ವಿ. ಸೋಮಣ್ಣ ಅವರು ಜುಲೈ 17ರಂದು ಮಂಗಳೂರಿಗೆ ಆಗಮಿಸಿ ಸಭೆ ನಡೆಸಲು ಒಪ್ಪಿಗೆ ನೀಡಿದ್ದಾರೆ. ಬೆಳಿಗ್ಗೆ 09.00 ರಿಂದ 09.45 ರ ವರೆಗೆ ಮಂಗಳೂರು ಸೆಂಟ್ರಲ್ ರೇಲ್ವೆ ನಿಲ್ದಾಣದ ವೀಕ್ಷಣೆ, 10.00 ರಿಂದ 10.45 ರ ವರೆಗೆ ಮಂಗಳೂರು ಜಂಕ್ಷನ್ ರೇಲ್ವೆ ನಿಲ್ದಾಣದ ವೀಕ್ಷಣೆ ಹಾಗೂ 11.00 ರಿಂದ ಮಧ್ಯಾಹ್ನ 2 ರ ವರೆಗೆ ಮಂಗಳೂರಿನ ಜಿಲ್ಲಾ
ಪಂಚಾಯತ್ ಸಭಾಭವನದಲ್ಲಿ ಮಂಗಳೂರು ವ್ಯಾಪ್ತಿಯ ರೈಲ್ವೇ ವಿವಿಧ ಬೇಡಿಕೆಗಳು, ಸಮಸ್ಯೆಗಳು ಹಾಗೂ ಅಭಿವೃದ್ಧಿಯ ವಿಚಾರಗಳ ಕುರಿತು ಸಭೆ ನಡೆಸಲಿದ್ದಾರೆ.
ವಿಶೇಷವಾಗಿ ಕೊಂಕಣ ಭಾಗದಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರ ಬಹುಕಾಲದ ಬೇಡಿಕೆಯಾದ ಕೊಂಕಣ ರೈಲ್ವೇ ಮತ್ತು ಭಾರತೀಯ ರೈಲ್ವೆಯ ವಿಲೀನ, ಈ ವಿಲೀನದಿಂದ ರೈಲ್ವೆ ಮೂಲಸೌಕರ್ಯಗಳ ಸುಧಾರಣೆ ಮತ್ತು ಪ್ರಯಾಣಿಕರ ಅನುಕೂಲ ಸುಗಮವಾಗಲಿದೆ.
ಮಂಗಳೂರು-ಬೆಂಗಳೂರು ರೈಲ್ವೇ ಮಾರ್ಗದ ಉನ್ನತೀಕರಣ: ಶಿರಾಡಿ ಘಾಟ್ ಭಾಗದ ಕಾರ್ಯಯೋಜನಾ ಅಧ್ಯಯನ ಮತ್ತು ಸುಬ್ರಹ್ಮಣ್ಯ-ಸಕಲೇಶಪುರ ಘಾಟ್ ಭಾಗದ ಸಾಮರ್ಥ್ಯ ವೃದ್ಧಿಯ ಪ್ರಸ್ತಾಪಗಳ ಕುರಿತು ಕರಾವಳಿ ಭಾಗದ ಶಾಸಕರು, ಜನಪ್ರತಿನಿಧಿಗಳು, ರೈಲ್ವೇ ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಗಳ ಉಪಸ್ಥಿತಿಯಲ್ಲಿ ಚರ್ಚೆ ನಡೆಯಲಿದೆ.
ಈ ಸಭೆಯು ದಕ್ಷಿಣ ಕನ್ನಡದ ರೈಲ್ವೆ ಪ್ರಯಾಣಿಕರು ಮತ್ತು ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಚರ್ಚಿಸಿ, ಅವುಗಳಿಗೆ ಪರಿಹಾರ ಕೊಂಡುಕೊಳ್ಳುವ ನಿಟ್ಟಿನಲ್ಲಿ ಸಹಕಾರಿಯಾಗಲಿದೆ ಎಂದು ಸಂಸದರ ಕಚೇರಿ ಪ್ರಕಟಣೆ ತಿಳಿಸಿದೆ.