ಅಹಮದಾಬಾದ್: ಭಾರತ ಮೂಲದ ಹಲವು ಮಂದಿ ಕ್ರಿಕೆಟರ್ಗಳು ವಿದೇಶಿ ತಂಡದಲ್ಲಿ ಆಡುತ್ತಿರುವುದು ಸಾಮಾನ್ಯ. ಇದೀಗ ನಡೆಯುತ್ತಿರುವ ವಿಶ್ವಕಪ್ ಪಂದ್ಯಾಕೂಟಕ್ಕೆ ಬಂದಿರುವ ವಿದೇಶಿ ತಂಡಗಳಲ್ಲಿ ಹಲವು ಭಾರತೀಯ ಮೂಲದ ಆಟಗಾರರಿದ್ದಾರೆ. ಅದರಲ್ಲಿ
ವಿಶ್ವಕಪ್ನ ಮೊದಲ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡದ ಯುವ ದಾಂಡಿಗ ರಚಿನ್ ರವೀಂದ್ರ ಭರ್ಜರಿ ಶತಕ ಸಿಡಿಸಿ ಮಿಂಚಿ ಗಮನ ಸೆಳೆದಿದ್ದಾರೆ. ಬೆಂಗಳೂರು ಮೂಲದ ಕನ್ನಡಿಗ ರಚಿನ್ 82 ಎಸೆತಗಳಲ್ಲಿ
ಶತಕ ಪೂರೈಸಿದರು. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಕೇವಲ 96 ಎಸೆತಗಳನ್ನು ಎದುರಿಸಿದ ರಚಿನ್ 5 ಭರ್ಜರಿ ಸಿಕ್ಸ್ ಹಾಗೂ 11 ಫೋರ್ಗಳೊಂದಿಗೆ ಅಜೇಯ 123 ರನ್ ಬಾರಿಸಿ ತಂಡದ ಗೆಲುವಿಗೆ ಕಾರಣರಾದರು.
ನ್ಯೂಝಿಲೆಂಡ್ನಲ್ಲಿ ಸಾಫ್ಟ್ವೇರ್ ಸಿಸ್ಟಮ್ ಆರ್ಕಿಟೆಕ್ಟ್ ಆಗಿರುವ ಬೆಂಗಳೂರು ಮೂಲದ ರವೀಂದ್ರ ಕೃಷ್ಣಮೂರ್ತಿ ಹಾಗೂ ದೀಪಾ ಕೃಷ್ಣಮೂರ್ತಿ ದಂಪತಿ ಪುತ್ರ ಇವರು. 1990ರಲ್ಲಿ ನ್ಯೂಝಿಲೆಂಡ್ಗೆ ತೆರಳಿದ್ದ ರಚಿನ್ ಅವರ ತಂದೆ ಇವರನ್ನು ಕ್ರಿಕೆಟರ್ ಆಗಿ ಬೆಳೆಸಿದರು.
ಕ್ರಿಕೆಟ್ ಅಭಿಮಾನಿಯಾದ ಕೃಷ್ಣಮೂರ್ತಿ ತನ್ನ ಮಗನಿಗೆ ರಚಿನ್ ಎಂದು ಹೆಸರಿಸಿರುವುದರ ಹಿಂದೆಯೂ ಒಂದು ಕುತೂಹಲ ಇದೆ. ರಾಹುಲ್ ದ್ರಾವಿಡ್ ಹಾಗೂ ಸಚಿನ್ ತೆಂಡೂಲ್ಕರ್ ಅಭಿಮಾನಿಯಾಗಿರುವ ಕೃಷ್ಣಮೂರ್ತಿಯವರು ತಮ್ಮ ಮಗನಿಗೆ ಈ ರಾಹುಲ್ ದ್ರಾವಿಡ್ ಹೆಸರಿನ “ರ” ಹಾಗೂ ಸಚಿನ್ ಹೆಸರಿನ “ಚಿನ್” ಸೇರಿಸಿ ರಚಿನ್ ಎಂದು ಹೆಸರಿಟಿದ್ದಾರೆ. ಏಕದಿನ ವಿಶ್ವಕಪ್ನಲ್ಲಿ ಶತಕ ಸಿಡಿಸಿದ ನ್ಯೂಝಿಲೆಂಡ್ನ ಅತ್ಯಂತ ಕಿರಿಯ ಬ್ಯಾಟರ್ ಎಂಬ ದಾಖಲೆ 23 ವರ್ಷದ ರಚಿನ್ ರವೀಂದ್ರ ಪಾಲಾಯಿತು. ರಚಿನ್ ರವೀಂದ್ರ ಹಲವು ಬಾರಿ ಭಾರತದಲ್ಲಿ ಟೂರ್ನಿಗಳನ್ನು ಆಡಲು ಬಂದಿದ್ದಾರೆ. ಅಲ್ಲದೆ ಕೆಲ ಕ್ಲಬ್ಗಳ ವಿರುದ್ಧ ಆಡಿದ ಅನುಭವಗಳನ್ನು ಸಹ ಹೊಂದಿದ್ದಾರೆ.