ಬೆಂಗಳೂರು:ತನ್ನ ಮೂಲ ನೆಲವಾದ ಬೆಂಗಳೂರಿನಲ್ಲಿ ರಚಿನ್ ರವೀಂದ್ರ ಸಿಡಿಸಿದ ಅಮೋಘ ಶತಕದ ನೆರವಿನಿಂದ ನ್ಯೂಝಿಲೆಂಡ್ ತಂಡ ವಿಶ್ವಕಪ್ನ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಬೆಟ್ಟದಂತಹಾ ಗುರಿ ನೀಡಿದೆ. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ
401 ರನ್ಗಳ ಬೃಹತ್ ಮೊತ್ತ ಪೇರಿಸಿದೆ.ರಚಿನ್ ರವೀಂದ್ರ ಶತಕ (108) ಸಿಡಿಸಿ ಸಂಭ್ರಮಿಸಿದರೆ, ಕೇನ್ ವಿಲಿಯಮ್ಸನ್ 95, ಗ್ಲೆನ್ ಫಿಲಿಪ್ಸ್ 41, ಮಾರ್ಕ್ ಚಾಪ್ಮನ್ 39, ಡೆವಾನ್ ಕಾನ್ವೆ 35, ಡೇರಿಲ್ ಮಿಚೆಲ್ 29, ಮಿಚೆಲ್ ಸ್ಯಾಂಟ್ನರ್ ಔಟಾಗದೆ 26 ರನ್ ತಂಡಕ್ಕೆ ಆಸರೆಯಾದರು.
ಪಾಕ್ ಪರ ಮೊಹಮ್ಮದ್ ವಸೀಮ್, ಹ್ಯಾರಿಸ್ ರವೂಫ್, ಇಫ್ತಿಕಾರ್ ಅಹಮದ್, ಹಸನ್ ಅಲಿ ತಲಾ ಒಂದೊಂದು ವಿಕೆಟ್ ಕಬಳಿಸಿದರು.
ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ನ್ಯೂಜಿಲೆಂಡ್ನ ಯುವ
ಎಡಗೈ ಬ್ಯಾಟರ್ ರಚಿನ್ ರವೀಂದ್ರ ಮೂರನೇ ಶತಕ ದಾಖಲಿಸಿ ಸಂಭ್ರಮಿಸಿದ್ದಾರೆ. 94 ಎಸೆತಗಳಲ್ಲಿ 15 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 108 ರನ್ ಗಳಿಸಿದರು.ಚೊಚ್ಚಲ ವಿಶ್ವಕಪ್ ಆಡುತ್ತಿರುವ 23 ವರ್ಷದ ರಚಿನ್ ಮೂರು ಶತಕಗಳನ್ನು ಗಳಿಸಿದ್ದಾರೆ. ರಚಿನ್ ಅವರು ಹುಟ್ಟಿ ಬೆಳೆದದ್ದು ನ್ಯೂಜಿಲೆಂಡ್ನಲ್ಲಾದರೂ, ಬೆಂಗಳೂರು ಜತೆ ನಂಟು ಹೊಂದಿದ್ದಾರೆ. ಅವರ ತಂದೆ, ರವೀಂದ್ರ ಬೆಂಗಳೂರಿನವರು. ಹೆತ್ತವರ ಜತೆ ರಚಿನ್ ಹಲವು ಸಲ ಬೆಂಗಳೂರಿಗೆ ಬಂದಿದ್ದಾರೆ. ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಪ್ರೀತಿಯ ಮೇಲೆ ಮಗನಿಗೆ ರಚಿನ್ (ರ ಹಾಗೂ ಚಿನ್) ಎಂಬ ಹೆಸರನ್ನು ಇಟ್ಟಿದ್ದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಶ್ವಕಪ್ ಪಂದ್ಯ ಆಡುವ ಮೂಲಕ ಬೆಂಗಳೂರಿನ ಕ್ರೀಡಾಪ್ರೇಮಿಗಳ ಪ್ರೀತಿಗೆ ರಚಿನ್ ಪಾತ್ರರಾಗಿದ್ದಾರೆ. ‘ರಚಿನ್, ರಚಿನ್’ ಎಂದು ಜೈಕಾರ ಕೂಗಿದ ಅಭಿಮಾನಿಗಳನ್ನು ಶತಕ ಬಾರಿಸಿ ರಂಜಿಸಿದ್ದಾರೆ.









