ಸುಳ್ಯ: ಸುಳ್ಯ ಪಶು ಆಸ್ಪತ್ರೆಯಲ್ಲಿ ವಿಶ್ವ ರೇಬಿಸ್ ದಿನಾಚರಣೆ ಮತ್ತು ಪ್ರಾಣಿ ಕಲ್ಯಾಣ ಜಾಗೃತಿ ಕಾರ್ಯಕ್ರಮ ವನ್ನು ಆಯೋಜಿಸಲಾಗಿತ್ತು. ವಿಶ್ವರೇಬಿಸ್ ದಿನಾಚರಣೆಯ ಅಂಗವಾಗಿ ವಿವಿಧ ಪ್ರಚಾರ ಸಾಮಗ್ರಿಗಳನ್ನು ಮತ್ತು ಸಾಕು ಪ್ರಾಣಿಗಳಿಗಾಗಿ ಲಸಿಕಾ ಕಾರ್ಡುಗಳನ್ನು ಬಿಡುಗಡೆ ಮಾಡಲಾಯಿತು.ಪಶು ಸಂಗೋಪನಾ ಇಲಾಖೆಯ
ಸಹಾಯಕ ನಿರ್ದೇಶಕರಾದ ಡಾ ನಿತಿನ್ ಪ್ರಭು ಕೆ ಮಾತನಾಡಿ ‘2030ರ ಒಳಗಾಗಿ ಭಾರತದಿಂದ ನಾಯಿಗಳಿಂದ ಹರಡುವ ರೇಬಿಸ್ ರೋಗವನ್ನು ಸಂಪೂರ್ಣವಾಗಿ ತಡೆಗಟ್ಟುವ ನಿಟ್ಟಿನಲ್ಲಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ಗಳ ವ್ಯಾಪ್ತಿಯಲ್ಲಿ ರೇಬಿಸ್ ರೋಗನಿರೋಧಕ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ, ತಾಲೂಕಿನ ವಿವಿಧ ಶಾಲೆ ಕಾಲೇಜುಗಳಲ್ಲಿ ಪಶುಸಂಗೋಪನಾ ಇಲಾಖೆಯ ವತಿಯಿಂದ ಅರಿವು ಮೂಡಿಸುವ ಕಾರ್ಯಕ್ರಮ ನಡೆಯುತ್ತಿದೆ ಇದರಿಂದಾಗಿ ರೇಬಿಸ್ ರೋಗ ಮತ್ತು ಅದರ ನಿವಾರಣೋಪಾಯಗಳ ಬಗ್ಗೆ ಸಾಕಷ್ಟು ಅರಿವು ಮೂಡಿಸಲಾಗುತ್ತಿದೆ ಮುಂದಿನ ದಿನಗಳಲ್ಲಿ ರೇಬಿಸ್ ರೋಗ ಸಂಪೂರ್ಣ ನಿರ್ಮೂಲನ ಮಾಡಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಮಾತನಾಡಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳಲ್ಲೂ ಎಲ್ಲಾ ಸಾಕು ನಾಯಿಗಳಿಗೂ ಪಶು ಸಂಗೋಪನಾ ಇಲಾಖೆಯ ಸಹಕಾರದೊಂದಿಗೆ ರೇಬಿಸ್ ರೋಗದ ವಿರುದ್ಧ ಲಸಿಕೆ ಹಾಕಿಸಿಕೊಳ್ಳುವಂತೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಲಾಗಿದೆ. ಎಲ್ಲಾ ಗ್ರಾಮಗಳಲ್ಲಿಯೂ ಈ ಕಾರ್ಯಕ್ರಮ ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿದೆ ಎಂದರು. ಸುಳ್ಯ ಪೊಲೀಸ್ ಉಪ ನಿರೀಕ್ಷಕ ಸಂತೋಷ್ ಬಿ.ಪಿ., ಕ್ಷೇತ್ರ ಶಿಕ್ಷಣಾಧಿಕಾರಿ ಶೀತಲ್ ಯು ಕೆ, ಡಾ ನಾಗರಾಜ್ , ರೋಟರಿ ಕ್ಲಬ್ ಧ್ಯಕ್ಷ ಡಾ. ರಾಮಮೋಹನ್, ರೋಟರಿ ಕ್ಲಬ್ ಸುಳ್ಯ ಸಿಟಿ ಅಧ್ಯಕ್ಷ ಹೇಮಂತ್ ಕಾಮತ್, ಪಶುಸಂಗೋಪನ ಇಲಾಖೆಯ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.





