ಬೆಳಗಾವಿ:ಸುಳ್ಯ ಕ್ಷೇತ್ರದ ಲೋಕೋಪಯೋಗಿ ರಸ್ತೆಗಳ ಮುಂದುವರಿದ ಕಾಮಗಾರಿಗಳಿಗೆ 2013-24ನೇ ಸಾಲಿನಲ್ಲಿ 1019.31 ಲಕ್ಷ ಅನುದಾನ ಮೀಸಲಿರಿಸಲಾಗಿದೆ ಎಂದು ರಾಜ್ಯ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೋಳಿ ತಿಳಿಸಿದ್ದಾರೆ. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಪ್ರಶ್ನೆಗೆ ಸಚಿವರು ಈ ಉತ್ತರ ನೀಡಿದ್ದಾರೆ. ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ
ಹಾದು ಹೋಗುವ ರಾಜ್ಯ ಹೆದ್ದಾರಿ ಜಿಲ್ಲಾ ಮುಖ್ಯ ರಸ್ತೆಗಳಾವುವು. ಈ ರಸ್ತೆಗಳ ಅಭಿವೃದ್ಧಿಗೆ 2023- 24 ಸಾಲಿನಲ್ಲಿ ಅನುದಾನ ಕಾಯ್ದಿರಿಸಲಾಗಿದೆಯೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಪ್ರಶ್ನಿಸಿದ್ದರು. ಇದಕ್ಕೆ ಉತ್ತರ ನೀಡಿದ ಸಚಿವರು
ದಕ್ಷಿಣ ಕನ್ನಡ ಜಿಲ್ಲೆ, ಲೋಕೋಪಯೋಗಿ ಇಲಾಖೆ, ಮಂಗಳೂರು ವಿಭಾಗದ ವ್ಯಾಪ್ತಿಯಲ್ಲಿ ಬರುವ ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 210.04 ಕಿ.ಮೀ. ಉದ್ದದ 7 ರಾಜ್ಯ ಹೆದ್ದಾರಿ ರಸ್ತೆಗಳು ಮತ್ತು 354.915 ಕಿ.ಮಿ. ಉದ್ದದ 28 ಜಿಲ್ಲಾ ಮುಖ್ಯ ರಸ್ತೆಗಳು ಹಾದು ಹೋಗುತ್ತವೆ. ಸುಳ್ಯ ವಿಧಾನಸಭಾ ಕ್ಷೇತ್ರದ ಈ ರಸ್ತೆಗಳ ಅಭಿವೃದ್ಧಿಗೆ 2023-24 ಮುಂದುವರಿದ ಕಾಮಗಾರಿಗಳಿಗೆ ರೂ.1019.31 ಲಕ್ಷ ಅನುದಾನವನ್ನು ಕಾಯ್ದಿರಿಸಲಾಗಿದೆ ಎಂದು ಲೋಕೋಪಯೋಗಿ ಸಚಿವರು ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ.
ನೂತನವಾಗಿ ರಚನೆಯಾದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿಗೆ ಲೋಕೋಪಯೋಗಿ ಸಹಾಯಕ ಅಭಿಯಂತರರ ಇಲಾಖೆಯ ಕಾರ್ಯನಿರ್ವಾಹಕ ಕಛೇರಿಯನ್ನು ತೆರೆಯುವ ಮತ್ತು ಇಂಜಿನಿಯರ್ ಮತ್ತು ಅಗತ್ಯ ಸಿಬ್ಬಂದಿಗಳನ್ನು ನೇಮಿಸುವ ಪ್ರಸ್ತಾವನೆ ಸರ್ಕಾರದ ಮುಂದೆ ಇದೆಯೇ, ಕಛೇರಿ ತೆರೆಯಲು ಮತ್ತು ಸಿಬ್ಬಂದಿಗಳ ನೇಮಕಾತಿ ಯಾವಾಗ ಕಾರ್ಯರೂಪಕ್ಕೆ ಬರುವುದು ಎಂಬ ಶಾಸಕಿ ಭಾಗೀರಥಿ ಮುರುಳ್ಯ ಪ್ರಶ್ನೆಗೆ ಉತ್ತರಿಸಿದ ಲೋಕೋಪಯೋಗಿ ಸಚಿವರು
ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಛೇರಿ, ಲೋಕೋಪಯೋಗಿ ವಿಶೇಷ ಉಪವಿಭಾಗ, ಕುಕ್ಕೆ ಸುಬ್ರಮಣ್ಯ ಕಛೇರಿಯನ್ನು ಹುದ್ದೆಗಳ ಸಮೇತ ನೂತನವಾಗಿ ರಚನೆಯಾದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕು ಕೇಂದ್ರಕ್ಕೆ ಸ್ಥಳಾಂತರಿಸುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ತಿಳಿಸಿದ್ದಾರೆ.









