ಸುಳ್ಯ: ರಾಜ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ ಅವರು ಫೆಬ್ರವರಿ 16ರಂದು ಸುಳ್ಯಕ್ಕೆ ಭೇಟಿ ನೀಡಿದರು. ಸುಳ್ಯ ನಿರೀಕ್ಷಣಾ ಮಂದಿರಕ್ಕೆ ಆಗಮಿಸಿದ ಸಚಿವರನ್ನು ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಇತರ ಮುಖಂಡರು, ಜನಪ್ರತಿನಿಧಿಗಳು ಸೇರಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸುಳ್ಳ ಕ್ಷೇತ್ರದ ರಸ್ತೆ, ಸೇತುವೆ, ಸುಳ್ಯ ನಗರಕ್ಕೆ ಬೈಪಾಸ್ ಸೇರಿದಂತೆ ವಿವಿಧ ಅಭಿವೃದ್ಧಿ ಬೇಡಿಕೆಗಳ ಮನವಿ ಸಲ್ಲಿಸಲಾಯಿತು. ಮನವಿಯನ್ನು ಸ್ವೀಕರಿಸಿದ ಸಚಿವರು ಆದ್ಯತೆಯ ಮೇರೆಗೆ ಅಭಿವೃದ್ಧಿಗೆ
ಅನುದಾನ ನೀಡುವುದಾಗಿ ಘೋಷಿಸಿದರು. ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ಮಲೆನಾಡು ಪ್ರದೇಶವಾದ ಸುಳ್ಯದ ರಸ್ತೆ, ಸೇತುವೆ ಮತ್ತಿತರ ಅಭಿವೃದ್ಧಿ ಬೇಡಿಕೆ ಸಾಕಷ್ಟು ಇದ್ದು ಅನುದಾನ ನೀಡಬೇಕು ಎಂದು ಬೇಡಿಕೆ ಸಲ್ಲಿಸಿದರು.
ಸುಳ್ಯ ನಗರಕ್ಕೆ ಬೈಪಾಸ್ ರಸ್ತೆ ನಿರ್ಮಾಣ ಮಾಡಬೇಕು ಎಂದು ಶಾಸಕರು ಹಾಗೂ ಪ್ರಮುಖರು ಒಕ್ಕೊರಲಿನಿಂದ ಬೇಡಿಕೆ ಸಲ್ಲಿಸಿದರು. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಯೋಜನಾ ವರದಿ ಸಿದ್ಧವಾಗುತ್ತಿದ್ದು ಡಿಪಿಆರ್ ಪರಿಶೀಲನೆ ಮಾಡಿದ ಬಳಿಕ ಈ ಕುರಿತು ಯೋಜನೆ ರೂಪಿಸುವುದಾಗಿ ಸಚಿವರು ತಿಳಿಸಿದರು.

ಸುಳ್ಯ ತಾಲೂಕಿನ ಲೋಕೋಪಯೋಗಿ ರಸ್ತೆ ರಸ್ತೆಗಳನ್ನು ಗುಂಡಿ ಮುಚ್ಚಿ ದುರಸ್ತಿ ಪಡಿಸುವಂತೆ ಮತ್ತು ನಡೆಯುತ್ತಿರುವ ಕಾಮಗಾರಿಗಳನ್ನು ನಿಶ್ಚಿತ ಕಾಲಮಿತಿಯೊಳಗೆ ಪೂರ್ತಿ ಮಾಡುವಂತೆ ಸಚಿವರು ಇಂಜಿನಿಯರ್ಗಳಿಗೆ ಸೂಚಿಸಿದರು.
ರಸ್ತೆಗಳ ಬದಿಯಲ್ಲಿ ಅವೈಜ್ಞಾನಿಕವಾಗಿ ಪೈಪ್ ಲೈನ್ ಅಳವಡಿಸುವ ಕಾಮಗಾರಿ ನಡೆಸಿ ಕಡಿದು ಹಾಕಿರುವುದರಿಂದ ಸುಳ್ಯ ತಾಲೂಕಿನ ಲೋಕೋಪಯೋಗಿ ಹಾಗೂ ಇತರ ರಸ್ತೆಗಳು ತೀವ್ರ ಹಾನಿಯಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಧಾಕೃಷ್ಣ ಬೊಳ್ಳೂರು ಸಚಿವರ ಗಮನಕ್ಕೆ ತಂದರು. ರಸ್ತೆ ಬದಿ ಮತ್ತು ರಸ್ತೆಯ ಮಧ್ಯೆ ಕಡಿಯುವುದರಿಂದ ಎಲ್ಲಾ ಲೋಕೋಪಯೋಗಿ ರಸ್ತೆಗಳು ಹಾನಿಗೊಂಡಿದ್ದು ಇದರಿಂದ ಸಂಚಾರಕ್ಕೆ ತೀವ್ರ ತೊಂದರೆ ಆಗಿದೆ ಆದರೆ ಕಡಿದ ರಸ್ತೆಗಳನ್ನು ಸರಿಪಡಿಸಲಾಗುತ್ತಿಲ್ಲ ಎಂದು ಅವರು ಹೇಳಿದರು. ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ ಕೃಷ್ಣಪ್ಪ ಅವರು ಕೂಡ ಧ್ವನಿಗೂಡಿಸಿ ಲೋಕೋಪಯೋಗಿ ರಸ್ತೆಗಳು ಹಾಯಾಗಿರುವ ಬಗ್ಗೆ ಸಚಿವರಿಗೆ ವಿವರಿಸಿದರು. ಈ ಕುರಿತು ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚೆ ನಡೆಸಿ ಸಂಬಂಧಪಟ್ಟವರಿಗೆ ಅಗತ್ಯ ನಿರ್ದೇಶನ ನೀಡುವುದಾಗಿ ಸಚಿವರು ತಿಳಿಸಿದರು.

ಸುಳ್ಯದಲ್ಲಿ ಎಲಿಪ್ಯಾಡ್ ನಿರ್ಮಾಣ ಮಾಡಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಮನವಿ ಸಲ್ಲಿಸಿದರು. ಇದಕ್ಕೆ ಸಂಬಂಧಪಟ್ಟು ಅಗತ್ಯ ಕ್ರಮ ಕೈಗೊಳ್ಳುವಂತೆ ಲೋಕೋಪಯೋಗಿ ಇಂಜಿನಿಯರ್ಗಳಿಗೆ ಸಚಿವರು ಸೂಚಿಸಿದರು.
ಸುಳ್ಯ- ಕೊಡಿಯಾಲ್ಬೈಲು- ದುಗ್ಗಲಡ್ಕ ರಸ್ತೆಯನ್ನು ಮೇಲ್ದರ್ಜೆಗೇರಿಸಿ ಅಭಿವೃದ್ದಿ ಪಡಿಸಬೇಕು, ನಗರಕ್ಕೆ ಬೈಪಾಸ್ ನಿರ್ಮಿಸಬೇಕು ಎಂದು ಕರ್ನಾಟಕದ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಮನವಿ ಸಲ್ಲಿಸಿದರು.
ಸುಳ್ಯ ಆಲೆಟ್ಟಿ-ಬಡ್ಡಡ್ಕ ಪಾಣತ್ತೂರು ಅಂತಾರಾಜ್ಯ ರಸ್ತೆಯಲ್ಲಿ ಎಲ್ಲಿ ಕರ್ನಾಟಕದ ಭಾಗವನ್ನು ಅಭಿವೃದ್ಧಿಪಡಿಸಬೇಕು ಎಂದು ಸತ್ಯಕುಮಾರ್ ಆಡಿಂಜ ಮನವಿ ಸಲ್ಲಿಸಿದರು.
ಅರಂತೋಡು- ಮರ್ಕಂಜ- ಎಲಿಮಲೆ ರಸ್ತೆ ಅಭಿವೃದ್ಧಿಪಡಿಸಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಹೀದ್ ತೆಕ್ಕಿಲ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಮತ್ತಿತರರು ಮನವಿ ಸಲ್ಲಿಸಿದರು. ಈ ರಸ್ತೆಯನ್ನು ವೀಕ್ಷಣೆ ಮಾಡಲಾಗಿದ್ದು ರಸ್ತೆ ಅಭಿವೃದ್ಧಿಗೆ ಆದ್ಯತೆಯ ಮೇರೆಗೆ ಅನುದಾನ ನೀಡುವುದಾಗಿ ತಿಳಿಸಿದರು.

ಸುಳ್ಯ ನಗರದ ಚರಂಡಿ ವ್ಯವಸ್ಥೆ ಸರಿಪಡಿಸಬೇಕು, ಪುರಭವನ ಅಭಿವೃದ್ಧಿಪಡಿಸಬೇಕು ಎಂದು ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಸದಸ್ಯರಾದ ಎಂ.ವೆಂಕಪ್ಪ ಗೌಡ, ಕೆ.ಎಸ್. ಉಮ್ಮರ್, ಶರೀಫ್ ಕಂಠಿ, ಶಿಲ್ಪಾ ಸುದೇವ್, ರಾಜು ಪಂಡಿತ್, ಸಿದ್ದಿಕ್ ಕೊಕ್ಕೊ ಮನವಿ ಸಲ್ಲಿಸಿದರು. ವಿವಿಧ ಬೇಡಿಕೆಗಳ ಹಲವು ಮನವಿಗಳನ್ನು ಸಲ್ಲಿಸಲಾಯಿತು.
ಶಾಸಕಿ ಭಾಗೀರಥಿ ಮುರುಳ್ಯ, ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ,ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ,
ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ,
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಹೀದ್ ತೆಕ್ಕಿಲ್,
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು,ಪ್ರಮುಖರಾದ ಹರೀಶ್ ಕಂಜಿಪಿಲಿ, ಎಂ.ಬಿ.ಸದಾಶಿವ, ಎಂ.ವೆಂಕಪ್ಪ ಗೌಡ, ಪಿ.ಎಸ್. ಗಂಗಾಧರ, ವಿನಯಕುಮಾರ್ ಕಂದಡ್ಕ, ಕೆ.ಎಂ.ಮುಸ್ತಫ, ಕೆ.ಎಸ್. ಉಮ್ಮರ್, ಎಸ್.ಸಂಶುದ್ದೀನ್,ಇಕ್ಬಾಲ್ ಎಲಿಮಲೆ,ಭವಾನಿಶಂಕರ ಕಲ್ಮಡ್ಕ, ಶಶಿಧರ ಎಂ.ಜೆ, ರಾಜು ಪಂಡಿತ್, ಮಂಜುನಾಥ್ ಮಡ್ತಿಲ, ಸತ್ಯಕುಮಾರ್ ಆಡಿಂಜ, ಸುರೇಶ್ ಅಮೈ, ಶರೀಪ್ ಕಂಠಿ, ಶಾಫಿ ಕುತ್ತಮೊಟ್ಟೆ, ಜಿ.ಕೆ.ಹಮೀದ್ ಗೂನಡ್ಕ, ಎಸ್.ಕೆ.ಹನೀಫ, ರಿಯಾಝ್ ಕಟ್ಟೆಕ್ಕಾರ್ಸ್,ಪ್ರಹ್ಲಾದ್ ಬೆಳ್ಳಿಪ್ಪಾಡಿ, ನಂದರಾಜ ಸಂಕೇಶ, ಶಿವರಾಮ ರೈ, ದೇವಿಪ್ರಸಾದ್ ಕುದ್ಪಾಜೆ, ರಾಧಾಕೃಷ್ಣ ಪರಿವಾರಕಾನ, ಶಿಲ್ಪಾ ಸುದೇವ್, ಪ್ರಸಾದ್ ಕಾಟೂರು, ಲೋಕೋಪಯೋಗಿ ಇಲಾಖೆ ಇಂಜಿನಿಯರ್ಗಳು, ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.