ಸುಳ್ಯ: ಅಕ್ರಮ ಸಕ್ರಮ ಕಡತಗಳು ಮಂಜೂರಾತಿ ಆಗುತ್ತಿಲ್ಲ, ದೇವಸ್ಥಾನಗಳಿಗೆ ವ್ಯವಸ್ಥಾಪನ ಸಮಿತಿ ನೇಮಕ ವಿಳಂಬ ಆಗುತಿದೆ ಎಂದು ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಎದುರಿನಲ್ಲಿ ಸುಳ್ಯದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಅಸಮಾಧಾನ, ಅಹವಾಲು ತೋಡಿಕೊಂಡ ಘಟನೆ ನಡೆದಿದೆ. ಸುಳ್ಯಕ್ಕೆ ಆಗಮಿಸಿದ ಸಚಿವರು ಕೆಲ ಹೊತ್ತು ಕಾರ್ಯಕರ್ತರ ಅಹವಾಲು ಆಲಿಸಿದರು. ಸುಳ್ಯ ಕ್ಷೇತ್ರದಲ್ಲಿ ಜನರಿಗೆ ಯಾವುದೇ
ಅಕ್ರಮ ಸಕ್ರಮ ಭೂಮಿ ಮಂಜೂರಾತಿ ಆಗುತ್ತಿಲ್ಲ, ಸಮಿತಿಯ ಮುಂದೆ ಬಾರದೇ ಅಕ್ರಮ ಸಕ್ರಮ ಕಡತಗಳು ರದ್ದಾಗುತ್ತಿವೆ. ಈ ಕುರಿತು ಕಂದಾಯ ಸಚಿವರ ಗಮನಕ್ಕೆ ತಂದು ಸೂಕ್ತ ಪರಿಹಾರ ಆಗಬೇಕು ಎಂದು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಆಗ್ರಹಿಸಿದರು.
ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಪ್ರಮುಖ ದೇವಸ್ಥಾನಗಳಲ್ಲಿ ವ್ಯವಸ್ಥಾಪನಾ ಸಮಿತಿ ನೇಮಕ ಆಗದ ಬಗ್ಗೆ ಮುಖಂಡರು, ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು. ವಿವಿಧ ಇಲಾಖೆಗಳಲ್ಲಿ ದಲ್ಲಾಳಿಗಳ ಹಾವಳಿ ಜಾಸ್ತಿಯಾಗಿದೆ, ಇಲಾಖೆಗಳಲ್ಲಿ ಜನ ಸಾಮಾನ್ಯರ ಕೆಲಸ ಆಗುತ್ತಿಲ್ಲ ಎಂದು ಸಚಿವರ ಮುಂದೆ ಹೇಳಿದರು.
ಪೈಪ್ ಅಳವಡಿಕೆ ಸಂಬಂಧಿಸಿ ಸುಳ್ಯದ ಲೋಕೊಪಯೋಗಿ ಹಾಗೂ ಇತರ ರಸ್ತೆ ಹಾಗೂ ರಸ್ತೆ ಬದಿ ಅಗೆದು ಹಾಕಿ ಸಮರ್ಪಕವಾಗಿ ಮುಚ್ಚದೆ ತೀವ್ರ ಸಮಸ್ಯೆಯಾಗುತಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಹೇಳಿದರು. ಇದರಿಂದ ತಾಲೂಕಿನ ವಿವಿಧ ರಸ್ತೆಗಳು ಹಾನಿಗೊಂಡಿದ್ದು ಸಂಚಾರಕ್ಕೆ ದುಸ್ತರವಾಗಿದೆ. ಹಾನಿಯಾದ ರಸ್ತೆಗಳ ದುರಸ್ತಿಗೆ ಇಲಾಖಾ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಬೊಳ್ಳೂರು ಅಸಮಾಧಾನ ವ್ಯಕ್ತಪಡಿಸಿದರು. ಈ ಕುರಿತು ಸರಕಾರಿ ಮಟ್ಟದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಸಚಿವರು ಹೇಳಿದರು.