ಸುಳ್ಯ: ಸುಳ್ಯ ತಾಲೂಕಿನ ವಿವಿಧ ಬೇಡಿಕೆಗಳ ಬಗ್ಗೆ ಮನವಿ ನೀಡಲಾಗಿದ್ದು ಆದ್ಯತೆಯ ಮೇರೆಗೆ ರಸ್ತೆ, ಸೇತುವೆಗಳಿಗೆ ಅನುದಾನ ನೀಡುವುದಾಗಿ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಸುಳ್ಯಕ್ಕೆ ಭೇಟಿ ನೀಡಿದ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ಜನಕ್ಕೆ ಅತೀ ಅಗತ್ಯ ಇರುವ ರಸ್ತೆಗಳ ಬಗ್ಗೆ
ಪರಿಶೀಲನೆ ನಡೆಸಿ ಸರಕಾರ ಅನುದಾನ ನೀಡಲಿದೆ. ಅರಂತೋಡು, ಎಲಿಮಲೆ ರಸ್ತೆ ಪರಿಶೀಲನೆ ನಡೆಸಿದ್ದೇನೆ. ರಸ್ತೆ ಬಹಳ ಅಗತ್ಯ ಇದೆ, ಬಹಳಷ್ಟು ಜನ ಓಡಾಡುವ ರಸ್ತೆ ಎಂದ ಸಚಿವರು, ಸುಳ್ಯ- ಆಲೆಟ್ಟಿ ಪಾಣತ್ತೂರು ರಸ್ತೆ ಅಭಿವೃದ್ಧಿಯ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಜಿಲ್ಲೆಯ ರಸ್ತೆ ಮತ್ತಿತರ ಅಭಿವೃದ್ಧಿ ಬಗ್ಗೆ ಮಂಗಳವಾರ ಮಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಚರ್ಚಿಸಲಾಗುವುದು. ಪೈಪ್ ಅಳವಡಿಕೆಗೆ ರಸ್ತೆ ಕಡಿಯುವುದರ ಬಗ್ಗೆ ಸರಕಾರ ಮಟ್ಟದಲ್ಲಿ ಚರ್ಚೆ ನಡೆಸುತ್ತೇನೆ ಎಂದು ಸಚಿವರು ಹೇಳಿದರು.