ಪುತ್ತೂರು:ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಎದುರಿನ ದೇವರಮಾರು ಗದ್ದೆಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಹಾಗೂ ಪುತ್ತಿಲ ಪಂವಾರ ಸೇವಾ ಟ್ರಸ್ಟ್ ಸಾರಥ್ಯದಲ್ಲಿ ಭಾನುವಾರ ನಡೆಯುವ 3ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಶನಿವಾರ ಚಾಲನೆ ದೊರೆಯಿತು.ಶ್ರೀನಿವಾಸ ದೇವರು,ಶ್ರೀದೇವಿ-ಭೂದೇವಿಯರ ಉತ್ಸವ ಮೂರ್ತಿಗಳ ವೈಭವದ
ಪುರಪ್ರವೇಶ ಶನಿವಾರ ಸಂಜೆ ನಡೆಯಿತು. ಅಲಂಕೃತ ರಥದಲ್ಲಿ ಪವಡಿಸಿದ ಶ್ರೀ ದೇವರ ರಥದೊಂದಿಗಿನ ವೈಭವದ ಶೋಭಾಯಾತ್ರೆಗೆ ಬೊಳುವಾರಿನಲ್ಲಿ ಚಾಲನೆ ನೀಡಲಾಯಿತು. ಶೋಭಾಯಾತ್ರೆಯಲ್ಲಿ ಚೆಂಡೆ ಮೇಳ, ಭಜನಾ ತಂಡ ಸಾಥ್ ನೀಡಿತು. ವೈದಿಕರ ತಂಡ ರುದ್ರಪಠಣ ಮಾಡಿದರು. ದೇವಿಯರ ಸಹಿತ ರಥಾರೂಢರಾದ ಶ್ರೀನಿವಾಸ ದೇವರ ಭವ್ಯ ಶೋಭಾಯಾತ್ರೆ ಮುಖ್ಯರಸ್ತೆಯಲ್ಲಿ ಸಾಗಿ ಬಂತು.ಸಾವಿರಾರು ಭಕ್ತರು ಗೋವಿಂದ ನಾಮಸ್ಮರಣೆ ಮಾಡುತ್ತಾ ಹೆಜ್ಜೆ ಹಾಕಿದರು. ಮುಖ್ಯರಸ್ತೆಯಲ್ಲಿ ಬಂದ ಶೋಭಾಯಾತ್ರೆ ಶ್ರೀ ಮಹಾಲಿಂಗೇಶ್ವರ ದೇವಳದ ಎದುರಿನ ದೇವರ ಮಾರು ಗದ್ದೆ ಪ್ರವೇಶಿಸಿತು.
ಶ್ರೀನಿವಾಸ ಕಲ್ಯಾಣದ ಪ್ರಯುಕ್ತ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಕಲ್ಯಾಣೋತ್ಸವಕ್ಕಾಗಿ ಸಿದ್ಧಪಡಿಸಿದ ಮಂಟಪದಲ್ಲಿ ದೇವರ ಪ್ರತಿಷ್ಠಾ ವಿಧಿಯನ್ನು ತಿರುಪತಿಯ ಪುರೋಹಿತ ವರ್ಗ ನಡೆಸಿಕೊಟ್ಟರು.ಬಳಿಕ ರಾತ್ರಿ ಸ್ವಾಮೀಜಿಗಳ ದಿವ್ಯ ಉಪಸ್ಥಿತಿಯಲ್ಲಿ ಹಿಂದವಿ ಸಾಮ್ರಾಜ್ಯೋತ್ಸವ ನಡೆಯಿತು.ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.ಭಾನುವಾರ ಸಂಜೆ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ.













