ಸುಳ್ಯ:ತೀವ್ರ ಕುತೂಹಲ ಕೆರಳಿಸಿರುವ ಪುತ್ತೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಸಸ್ಪೆನ್ಸ್ ಆಗಿಯೇ ಉಳಿದಿದೆ.124 ಕ್ಷೇತ್ರಗಳ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಹೈಕಮಾಂಡ್ ಘೋಷಣೆ ಮಾಡಿದ್ದರೂ ಪುತ್ತೂರು ಕ್ಷೇತ್ರದ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಪುತ್ತೂರು ಕ್ಷೇತ್ರದ ಅಭ್ಯರ್ಥಿಯ ಸಾಧ್ಯತಾ ಪಟ್ಟಿಯಲ್ಲಿ ಸುಳ್ಯದ ಇಬ್ಬರು ನಾಯಕರ ಹೆಸರು ಮುಂಚೂಣಿಯಲ್ಲಿದೆ ಎಂಬುದು ಲೇಟೆಸ್ಟ್ ಸುದ್ದಿ.ಪುತ್ತೂರು ಕ್ಷೇತ್ರದ ಅಭ್ಯರ್ಥಿತನ ಈ ಬಾರಿ ಒಕ್ಕಲಿಗ ಗೌಡ
ಸಮುದಾಯಕ್ಕೆ ಒಲಿಯುವ ಸಾಧ್ಯತೆ ಇದೆ ಎಂಬ ನಿರೀಕ್ಷೆ ಇಲ್ಲಿನ ಗೌಡ ಸಮುದಾಯದ ಕಾಂಗ್ರೆಸ್ ಮುಖಂಡರಲ್ಲಿದೆ.ಸುಳ್ಯದ ಒಕ್ಕಲಿಗ ಮುಖಂಡರಿಗೆ ಟಿಕೆಟ್ ಸಿಗುವ ಸೂಚನೆ ಇದೆ ಎಂಬ ಸೂಚನೆ ರಾಜಕೀಯ ವಲಯದಲ್ಲಿ ದಟ್ಟವಾಗಿದೆ. ಅಭ್ಯರ್ಥಿಯಾಗುವ ಸಾಧ್ಯತೆಯಲ್ಲಿ ಸುಳ್ಯದ ಹಿರಿಯ ಕಾಂಗ್ರೆಸ್ ಮುಖಂಡರಾದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ ಹಾಗು ಕೆಪಿಸಿಸಿ ಸದಸ್ಯ ಭರತ್ ಮುಂಡೋಡಿ ಅವರ ಹೆಸರು ಮುಖ್ಯವಾಗಿ ಕೇಳಿ ಬರುತಿದೆ.
ಪ್ರತಿಯೊಂದು ಚುನಾವಣೆಯಲ್ಲಿಯೂ ಚುನಾವಣೆ, ಫಲಿತಾಂಶಕ್ಕಿಂತಲೂ ಹೆಚ್ಚು ಕುತೂಹಲ ಮೂಡಿಸುವ ಅಂಶವೆಂದರೆ ಅದು ಪುತ್ತೂರಿನ ಅಭ್ಯರ್ಥಿ ಆಯ್ಕೆ.ಸುಳ್ಯ ಮೀಸಲು ಕ್ಷೇತ್ರವಾದ ಕಾರಣ ವಿಧಾನಸಭಾ ಚುನಾವಣೆ ಬಂದರೆ ಸುಳ್ಯದ ಇತರ ಸಮುದಾಯಗಳ ಪ್ರಮುಖರು ದೃಷ್ಠಿ ನೆಡುವುದು ಪುತ್ತೂರಿನತ್ತ.

ಈ ಬಾರಿಯೂ ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಕಾಂಕ್ಷಿಗಳಾಗಿ ಕಾಂಗ್ರೆಸ್, ಬಿಜೆಪಿ ಪಟ್ಡಿಯಲ್ಲಿ ಸುಳ್ಯದವರ ಹಲವು ಹೆಸರುಗಳು ಕೇಳಿ ಬಂದಿದೆ. ಕಾಂಗ್ರೆಸ್ ಪಾಳಯದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ಕೆಪಿಸಿಸಿ ಸದಸ್ಯ ಭರತ್ ಮುಂಡೋಡಿ, ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಹೆಸರು ಮುಖ್ಯವಾಗಿ ಕೇಳಿ ಬಂದಿತ್ತು. ಈ ಮಧ್ಯೆ ಕಾಂಗ್ರೆಸ್ನಿಂದ ಒಕ್ಕಲಿಗ ಸಮುದಾಯಕ್ಕೆ ಪುತ್ತೂರಿನ ಸೀಟ್ ನೀಡಬೇಕು ಎಂಬ ಬೇಡಿಕೆಯೂ ಇತ್ತು. ಈ ನಿಟ್ಟಿನಲ್ಲಿ ನಿಯೋಗ ತೆರಳಿ ಕಾಂಗ್ರೆಸ್ ವರಿಷ್ಠರಿಗೆ ಮನವಿಯನ್ನೂ ನೀಡಿ ಪ್ರಯತ್ನ ನಡೆದಿತ್ತು. ಕ್ಷೇತ್ರದ ಟಿಕೆಟ್ ಘೋಷಣೆಗೆ ಕ್ಷಣಗಣನೆ ಆರಂಭವಾಗಿದ್ದು ಪುತ್ತೂರು ಅಭ್ಯರ್ಥಿ ರೇಸ್ನಲ್ಲಿ ಧನಂಜಯ ಅಡ್ಪಂಗಾಯ ಹಾಗು ಭರತ್ ಮುಂಡೋಡಿ ಅವರ ಹೆಸರು ಸಕ್ರೀಯವಾಗಿ ಕೇಳಿ ಬರುತಿದೆ. ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಾಗ ಬಯಸುವವರಿಂದ ಕೆಪಿಸಿಸಿ ಅರ್ಜಿ ಆಹ್ವಾನಿಸಿತ್ತು.ಪುತ್ತೂರು ಕ್ಷೇತ್ರದಿಂದ ಟಿಕೆಟ್ ಬಯಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ಕೆಪಿಸಿಸಿ ಸದಸ್ಯ ಭರತ್ ಮುಂಡೋಡಿ,ದಿವ್ಯಪ್ರಭಾ ಚಿಲ್ತಡ್ಕ ಸೇರಿ 14ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದರು.

ಧನಂಜಯ ಅಡ್ಪಂಗಾಯ, ಭರತ್ ಮುಂಡೋಡಿ ಅವರ ಹೆಸರು ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ರೇಸ್ನಲ್ಲಿ ಈ ಹಿಂದೆಯೂ ಹಲವು ಬಾರಿ ಕೇಳಿ ಬಂದಿತ್ತು.1999 ಮತ್ತು 2004ರಲ್ಲಿ ಧನಂಜಯ ಅಡ್ಪಂಗಾಯ ಅವರ ಹೆಸರು ಅಂತಿಮ ಸುತ್ತಿಗೆ ತಲುಪಿ ಅಂಗೀಕಾರಗೊಂಡಿದ್ದರೂ ಕೊನೆಯ ಕ್ಷಣದಲ್ಲಿ ತಪ್ಪಿ ಹೋಗಿತ್ತು.ಭರತ್ ಮುಂಡೋಡಿ ಹೆಸರು 2008 ಮತ್ತು 2013ರಲ್ಲಿ ಪುತ್ತೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಾಂಗ್ರೆಸ್ನ ಕೇಂದ್ರ ಚುನಾವಣಾ ಸಮಿತಿಯವರೆಗೆ ಹೋಗಿ ಅಂಗೀಕಾರಗೊಂಡಿತು. ಆದರೆ ಕೊನೆಯ ಕ್ಷಣದಲ್ಲಿ ಕೈ ತಪ್ಪಿ ಹೋಗಿತ್ತು. ಈಗ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಧನಂಜಯ ಅಡ್ಪಂಗಾಯ ಅವರು ಕೆಪಿಸಿಸಿಯ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದರು.ಕಾಂಗ್ರೆಸ್ ಜಿಲ್ಲಾ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಚರಾಗಿದ್ದರು.
ಭರತ್ ಮುಂಡೋಡಿ ಕೆಪಿಸಿಸಿ ಸದಸ್ಯರಾಗಿ ಹಾಗು ಕೆಪಿಸಿಸಿ ವಕ್ತಾರರಾಗಿ, ದ.ಕ.ಜಿಲ್ಲಾ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಂಡೋಡಿ ಈ ಹಿಂದೆ ಜಿಲ್ಲಾ ಪಂಚಾಯತ್ ಹಾಗು ಜಿಲ್ಲಾ ಪತಿಷತ್ ಸದಸ್ಯರಾಗಿ ಕೆಲಸ ಮಾಡಿದ್ದಾರೆ.ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು.

ಒಟ್ಟಿನಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಕಣ ಚುನಾವಣೆ ಘೋಷಣೆಗೆ ಸಾಕಷ್ಟು ಮುನ್ನವೇ ಸಾಕಷ್ಟು ಕುತೂಹಲ ಕೆರಳಿಸಿದೆ.ಸುಳ್ಯದ ಪ್ರಮುಖರಿಗೆ ನಿರ್ಣಾಯಕವಾಗಿರುವ ಪುತ್ತೂರು ಕ್ಷೇತ್ರದಲ್ಲಿ ಯಾರಿಗೆ ಸೀಟ್ ಒಲಿಯುತ್ತದೆ ಎಂದು ಕಾದು ನೋಡಬೇಕಾಗಿದೆ.
ಸುಳ್ಯದ ರಾಜಕೀಯ ಕ್ಷೇತ್ರದಲ್ಲಿ ಬೆಳೆದು ಪುತ್ತೂರಿನಲ್ಲಿ ಸ್ಪರ್ಧಿಸಲು ಅವಕಾಶ ದೊರೆತವರು ಡಿ.ವಿ.ಸದಾನಂದ ಗೌಡರು. ಎರಡು ಬಾರಿ ಶಾಸಕರಾಗಿ, ಸಂಸದರಾಗಿ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ ರಾಜಕೀಯ ಕ್ಷೇತ್ರದಲ್ಲಿ ಉತ್ತುಂಗ ಶಿಖರವನ್ನೇರಿದವರು ಅವರು. ಸದಾನಂದ ಗೌಡರ ಬಳಿಕ ಮತ್ತೆ ಸುಳ್ಯದ ಯಾವ ಮುಖಂಡನಿಗೆ ಪುತ್ತೂರಿನಲ್ಲಿ ಸ್ಪರ್ಧಿಸುವ ಅವಕಾಶ ಒಲಿದು ಬರಲಿದೆ ಎಂಬ ಕಾತರ ಹಲವು ವರ್ಷದಿಂದ ಇದೆ.