ಪುತ್ತೂರು: ನಿನ್ನೆಯಷ್ಟೇ ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಸಮ್ಮುಖದಲ್ಲಿ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾದ ಬಳಿಕ ಪುತ್ತೂರಿಗೆ ಆಗಮಿಸಿದ ಪುತ್ತೂರು ಪರಿವಾರದ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರಿಗೆ ಬೆಂಬಲಿಗರು, ಕಾರ್ಯಕರ್ತರು ಸ್ವಾಗತ ನೀಡಿದರು. ಹೂಹಾರ ಹಾಕಿ ಸ್ವಾಗತಿಸಲಾಯಿತು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬಳಿಕ ಮಾತನಾಡಿದ
ಅರುಣ್ ಕುಮಾರ್ ಪುತ್ತಿಲ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ಕೈ ಬಲಪಡಿಸುವ ನಿಟ್ಟಿನಲ್ಲಿ ಮೋದಿ ಪರಿವಾರ ಮತ್ತು ಪುತ್ತಿಲ ಪರಿವಾರ ಒಟ್ಟಾಗಿ ಕೆಲಸ ಮಾಡಲಿದೆ ಎಂದು ಹೇಳಿದರು.ದ.ಕ.ಲೋಕಸಭಾ ಕ್ಷೇತ್ರದಲ್ಲಿ ಪಕ್ಷವು ಬ್ರಿಜೇಶ್ ಚೌಟರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಅವರನ್ನು ಗೆಲ್ಲಿಸಬೇಕಾದ ಜವಾಬ್ದಾರಿ ನಮ್ಮ ಮುಂದಿದೆ. ಕಾರ್ಯಕರ್ತರ ಭಾವನೆಗೆ ಪೂರಕವಾದ ಹೆಜ್ಜೆಯನ್ನು ಇಟ್ಟಿದ್ದೇವೆ.ಕಾರ್ಯಕರ್ತರ ಭಾವನೆಗೆ ಪೂರಕವಾದ ಹುದ್ದೆಯನ್ನು ಪಕ್ಷ ನೀಡುತ್ತದೆನ್ನುವ ವಿಶ್ವಾಸ ಇದೆ. ಪುತ್ತಿಲ ಪರಿವಾರ ಟ್ರಸ್ಟ್ ಮೂಲಕ ಸಮಾಜ ಸೇವಾ ಕೆಲಸಗಳು ಮುಂದುವರೆಯುತ್ತದೆ. ನಮ್ಮ ಜೊತೆಗೆ ಕಾರ್ಯಕರ್ತರು ಕೂಡ ಪಕ್ಷದ ಪರವಾಗಿ ಕೆಲಸ ಮಾಡುತ್ತಾರೆ ಎಂದು ಅವರು ಹೇಳಿದ್ದಾರೆ.