ಹೈದರಾಬಾದ್: ಪ್ರೊ ಕಬಡ್ಡಿ ಲೀಗ್ ಟೂರ್ನಮೆಂಟ್ನಲ್ಲಿ ಪುಣೇರಿ ಪಲ್ಟನ್ ತಂಡ ಚಾಂಪಿಯನ್ ಆಗಿದೆ. ಹರ್ಯಾಣ ಸ್ಟೀಲರ್ಸ್ ತಂಡವನ್ನು 28-25 ಅಂಕದಿಂದ ರೋಚಕವಾಗಿ ಮಣಿಸಿ ಮೊದಲ ಬಾರಿ ಪ್ರಶಸ್ತಿಯನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.ಗಚಿಬೌಲಿಯ ಜಿಎಂಸಿ ಬಾಲಯೋಗಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಪುಣೇರಿ ಪಲ್ಟನ್ ವಿರುದ್ಧ ಹರ್ಯಾಣ ಸ್ಟೀಲರ್ಸ್ ತೀವ್ರ
ಪೈಪೋಟಿ ನೀಡಿತು.ಪುಣೇರಿ ಪರ ಪಂಕಜ್ ಮೊಹಿತೆ 9 ಅಂಕ ಗಳಿಸಿದರು. ಹರ್ಯಾಣದ ಪರ ಶಿವಂ ಪತಾರೆ 6 ಅಂಕ ಗಳಿಸಿದರು.
ಕಳೆದ ಆವೃತ್ತಿಯ ಪಿಕೆಎಲ್ ಫೈನಲ್ ನಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ಸೋಲನುಭವಿಸಿ ರನ್ನರ್ಸ್ ಅಪ್ ಗೆ ತೃಪ್ತಿಪಟ್ಟಿದ್ದ ಪುಣೇರಿ ಈ ಬಾರಿ ತನ್ನ ತಪ್ಪನ್ನು ತಿದ್ದಿಕೊಂಡು ಟ್ರೋಫಿ ಬಾಚಿಕೊಂಡಿದೆ. ಪುಣೇರಿ ಪಲ್ಟನ್ 22 ಲೀಗ್ ಹಂತದ ಪಂದ್ಯಗಳ ನಂತರ 17ರಲ್ಲಿ ಜಯ, 2ರಲ್ಲಿ ಸೋಲು, 3ರಲ್ಲಿ ಡ್ರಾ ಸಾಧಿಸಿ ಒಟ್ಟು 96 ಪಾಯಿಂಟ್ಸ್ ಗಳಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದು ಸೆಮಿ ಫೈನಲ್ ಗೆ ಲಗ್ಗೆ ಇಟ್ಟಿತ್ತು. ಮೊದಲ ಸೆಮಿ ಫೈನಲ್ ನಲ್ಲಿ ಪಾಟ್ನಾ ಪೈರೇಟ್ಸ್ ತಂಡವನ್ನು 37-21 ಅಂಕದಿಂದ ಸೋಲಿಸಿ ಫೈನಲ್ ಗೆ ಲಗ್ಗೆ ಇಟ್ಟಿತ್ತು. 10ನೇ ಆವೃತ್ತಿಯ ಟೂರ್ನಿಯಲ್ಲಿ ಇದೀಗ 19ನೇ ಗೆಲುವು ದಾಖಲಿಸಿ ಪ್ರಶಸ್ತಿಗೆ ಮುತ್ತಿಟ್ಟಿದೆ.







