ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾಗಿ ಇಂದಿಗೆ ಒಂದು ವರ್ಷ ಸಂದಿದೆ.ಇಂದು ಪುನೀತ್ ಮೊದಲ ವರ್ಷದ ಪುಣ್ಯಸ್ಮರಣೆ. ಅಪ್ಪು ಸಮಾಧಿಗೆ ರಾಜ್ ಕುಟುಂಬದ ಸದಸ್ಯರು ಪೂಜೆ, ನಮನ ಸಲ್ಲಿಸುತ್ತಿದ್ದಾರೆ. ಸಮಾಧಿ ಬಳಿ ಅಭಿಮಾನಿಗಳು ಆಗಮಿಸಿ ಗೌರವ ನಮನ ಸಲ್ಲಿಸಿದರು. ಅಪ್ಪು ಪುಣ್ಯ ಸ್ಮರಣೆಗೆ ಬೇರೆ ಬೇರೆ ಊರುಗಳಿಂದ
ಅಭಿಮಾನಿಗಳು ಆಗಮಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಅಪ್ಪು ಅಭಿಮಾನಿಗಳು, ಪುನೀತ್ ಫೋಟೊಗಳನ್ನು ಹಾಕಿ ನೆನೆದು ಭಾವುಕರಾಗಿದ್ದಾರೆ. ಹಲವು ಮಂದಿ ವಾಟ್ಸಾಪ್ ಸ್ಟೇಟಸ್, ಸಾಮಾಜಿಕ ಜಾಲತಾಣದಲ್ಲಿ ಭಾವ ಚಿತ್ರ ಹಾಕಿ ಕಂಬನಿ ಮಿಡಿದಿದ್ದಾರೆ.ಪುನೀತ್ ರಾಜ್ಕುಮಾರ್ ಅವರ ಮೊದಲ ವರ್ಷದ ಪುಣ್ಯತಿಥಿ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಮಂದಿ ಗಣ್ಯರು ಗೌರವ ಸಲ್ಲಿಸಿದರು.‘ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿ, ಪವರ್ ಸ್ಟಾರ್ ಆಗಿ ಕನ್ನಡಿಗರ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಪ್ರೀತಿಯ ‘ಅಪ್ಪು’, ಡಾ. ಪುನೀತ್ ರಾಜ್ಕುಮಾರ್ ಅವರ ಪುಣ್ಯಸ್ಮರಣೆಯಂದು ಅವರಿಗೆ ಪ್ರೀತಿ ಪೂರ್ವಕ ನಮನಗಳು. ಅತಿ ಚಿಕ್ಕ ವಯಸ್ಸಿನಲ್ಲಿ ಅವರು ಮಾಡಿದ ಸಾಧನೆ, ಗಳಿಸಿದ ಜನಪ್ರಿಯತೆ, ಕೈಗೊಂಡ ಜನಸೇವೆಯನ್ನು ವರ್ಣಿಸಲು ಪದಗಳೇ ಸಾಲದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
ಹಲವು ಮಂದಿ ಗಣ್ಯರು ಟ್ವೀಟ್ ಮೂಲಕ ಸಾಮಾಜಿಕ ಜಾಲತಾಣದ ಮೂಲಕ ಗೌರವ ಸಲ್ಲಿಸಿದ್ದಾರೆ.