ಟೋಕಿಯೋ:ತಾಯಿ ಪ್ರೀತಿ ಸಿಗದೆ ಒಬ್ಬಂಟಿಯಾಗಿದ್ದ ಮರಿ ಕೋತಿ ಮರಿ ಪಂಚ್ ಜಗತ್ತಿನ ಮನ ಗೆದ್ದಿದೆ. ಅಮ್ಮನ ಅಪ್ಪುಗೆ ಇಲ್ಲದೆ ಒಬ್ಬಂಟಿಯಾದ ಪಂಚ್ಗೆ ಕೋಟ್ಯಾಂತರ ಮಂದಿ ಮನದ ಬೆಚ್ಚಗಿನ ಅಪ್ಪುಗೆ ನೀಡಿದೆ. ಹೌದು ಕಳೆದ ಎರಡು ದಿನಗಳಿಂದ ವೈರಲ್ ಆದ ಪ್ರೀತಿಗಾಗಿ ಹಂಬಲಿಸುವ ಕೋತಿ ಮರಿ ಎಲ್ಲರ ಕಣ್ಣಂಚಿನಲ್ಲಿ ಹನಿ ನೀರು ತರಿಸಿದೆ.ಪ್ರೀತಿಯಿಂದ
ವಂಚಿತವಾಗಿ ನಿರ್ಜೀವ ಗೊಂಬೆಯೊಂದಿಗೆ ಕಾಲ ಕಳೆಯುತ್ತಿದ್ದ ಪಂಚ್ ನೋಡುಗರ ಮನ ಕಲಕಿದೆ.ಜಪಾನ್ನ ಇಚಿಕಾವಾ ನಗರದ ಮೃಗಾಲಯದಲ್ಲಿ ವಾಸಿಸುತ್ತಿರುವ ಏಳು ತಿಂಗಳ ಮರಿ ಕೋತಿ ಪಂಚ್, ಹುಟ್ಟಿದ ಸ್ವಲ್ಪ ಸಮಯಕ್ಕೆ ತಾಯಿಯಿಂದ ತಿರಸ್ಕರಿಸಲ್ಪಟ್ಟಿತ್ತು. ಇತರ ಕೋತಿಗಳು ಪಂಚ್ನನ್ನು ದೂರ ತಳ್ಳುತ್ತಿದ್ದವು. ಇದರಿಂದ ಒಬ್ಬಂಟಿಯಾಗಿದ್ದ ಪಂಚ್ಗೆ ಮೃಗಾಲಯದ ಸಿಬ್ಬಂದಿ ಕೋತಿಯನ್ನೇ
ಹೋಲುವ ಗೊಂಬೆಯೊಂದನ್ನು ನೀಡಿದ್ದರು.ತನ್ನ ಬಳಗದಿಂದಲೇ ತಿರಸ್ಕೃತವಾದ ಪಂಚ್, ಗೊಂಬೆಯನ್ನೇ ತಾಯಿಯಾಗಿ ನೋಡುತ್ತಿದ್ದು. ತಾನು ಹೋಗುವ ಕಡೆಯಲೆಲ್ಲಾ ಗೊಂಬೆಯನ್ನು ಎಳೆದುಕೊಂಡು ಹೋಗುತ್ತಿತ್ತು. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಕೂಡ ಆಗಿತ್ತು. ಪಂಚ್ ಪರಿಸ್ಥಿತಿಯನ್ನು ಕಂಡು ಹಲವರು ಮರುಗಿದ್ದರು.ಇದೀಗ ಹೊಸ ವಿಡಿಯೊವೊಂದು ಬಿಡುಗಡೆಯಾಗಿದ್ದು, ಇತರ ಕೋತಿಗಳೊಂದಿಗೆ ಪಂಚ್ ಆಟವಾಡುತ್ತಿರುವುದು ನೋಡಬಹುದಾಗಿದೆ. ಪಂಚ್ ಇತರ ಕೋತಿಗಳೊಂದಿಗೆ ಬೆರೆಯಯವುದು ಕಂಡು ಬಂದಿದೆ.






