ಸುಳ್ಯ: ಮಾರ್ಚ್ 3ರಂದು ದೇಶದಾದ್ಯಂತ ನಡೆಯಲಿರುವ ಪಲ್ಸ್ ಪೋಲಿಯೋ ನಡೆಯಲಿದ್ದು ಸುಳ್ಯ ತಾಲೂಕಿನ 75 ಕೇಂದ್ರಗಳಲ್ಲಿ 10,220 ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಸುಳ್ಯ ತಾಲೂಕು ಆರೋಗ್ಯಾಧಿಕಾರಿ ಡಾ. ನಂದಕುಮಾರ್ ಹೇಳಿದರು. ಅವರು ತಾಲೂಕು ಕಚೇರಿಯಲ್ಲಿ ಗುರುವಾರ ನಡೆದ ಪಲ್ಸ್ ಪೋಲಿಯೋ ಕಾರ್ಯಕ್ರಮದ ಪೂರ್ವಭಾವಿ ಸಭೆ ಹಾಗೂ
ಸುಳ್ಯ ತಾಲೂಕು ಪಲ್ಸ್ ಪೋಲಿಯೋ ಟಾಸ್ಕ್ ಪೋರ್ಸ್ ಸಮಿತಿ ಸಭೆಯಲ್ಲಿ ಹೇಳಿದರು.
ಪುತ್ತೂರು ಉಪವಿಭಾಗ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಅಧ್ಯಕ್ಷತೆ ವಹಿಸಿ ಮಾತನಾಡಿ ಪಲ್ಸ್ ಪೋಲೀಯೋ ಕಾರ್ಯಕ್ರಮದ ಯಶಸ್ವಿ ಹಾಗೂ ಎಲ್ಲಾ ಅರ್ಹ ಮಕ್ಕಳು ಪ್ರಯೋಜನ ಪಡೆದುಕೊಳ್ಳಲು ಒಟ್ಟಾಗಿ ಕೆಲಸ ಮಾಡಬೇಕಿದೆ. ಆಧಿಕಾರಿಗಳು, ಇಲಾಖೆಯವರು, ಸ್ಥಳೀಯಾಡಳಿತ, ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿ ಮಾಡಲು ನಿರ್ದೇಶನ ನೀಡಿದರು. ಈ ಹಿಂದೆ ಯಾವ ರೀತಿಯಲ್ಲಿ ಪಲ್ಸ್ ಪೊಲೀಯೋ ಕಾರ್ಯಕ್ರಮ ನಡೆಸಲಾಗಿತ್ತು ಅದರಂತೆ ಕಾರ್ಯಕ್ರಮ ನಡೆಸಲು ಪೂರ್ವ ಸಿದ್ಧತೆ, ತಯಾರಿ ನಡೆಸುವಂತೆ ಸೂಚಿಸಿದರು.

ಸುಳ್ಯ ತಾಲೂಕು ಆರೋಗ್ಯಾಧಿಕಾರಿ ಡಾ.ನಂದ ಕುಮಾರ್ ಮಾತನಾಡಿ, ಸುಳ್ಯ ತಾಲೂಕಿನ ಅಂಗನವಾಡಿ ಕೇಂದ್ರ, ಉಪಾರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ, ಕೆವಿಜಿ ಮೆಡಿಕಲ್ ಕಾಲೇಜು, ಸುಳ್ಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಎದುರು ಸೇರಿದಂತೆ ತಾಲೂಕಿನ 75ಬೂತ್ಗಳಲ್ಲಿ ಪಲ್ಸ್ ಪೊಲೀಯೋ ನೀಡಲಾಗುತ್ತದೆ. ಸುಳ್ಯ ತಾಲೂಕಿನಲ್ಲಿ ೯೧೨೬ 9126 ಅರ್ಹ ಮಕ್ಕಳಿದ್ದು, ಕಳೆದ ಬಾರಿಯ ಗುರಿ ಸಾಧನೆಯಂತೆ ಈ ಬಾರಿ ಸುಳ್ಯಕ್ಕೆ 10,220 ಮಕ್ಕಳ ಗುರಿ ನೀಡಲಾಗಿದೆ ಎಂದು ತಿಳಿಸಿದರು. ಸುಳ್ಯ ತಹಸೀಲ್ದಾರ್ ಜಿ.ಮಂಜುನಾಥ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್, ಸುಳ್ಯ ತಾಲೂಕು ಆಸ್ಪತ್ರೆ ಆಡಳಿತಾಧಿಕಾರಿ ಡಾ.ಕರುಣಾಕರ, ಪಂಜ ಪ್ರಾಥಮಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಮಂಜುನಾಥ್, ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ತ್ರಿಮೂರ್ತಿ, ಸುಳ್ಯ ನ.ಪಂ. ಮುಖ್ಯಾಧಿಕಾರಿ ಸುಧಾಕರ್, ಪ್ರಮುಖರಾದ ತಾಲೂಕು ಐ.ಎಂ.ಎ ಅಧ್ಯಕ್ಷೆ ಡಾ.ವೀಣಾ, ರೆಡ್ ಕ್ರಾಸ್ ಸಂಚಾಲಕ ಪಿ.ಬಿ. ಸುಧಾಕರ ರೈ, ರೋಟರಿ ಕ್ಲಬ್ ಅಧ್ಯಕ್ಷ ಆನಂದ ಖಂಡಿಗ, ನ.ಪಂ. ಸದಸ್ಯರಾದ ವಿನಯಕುಮಾರ್ ಕಂದಡ್ಕ, ಉಮ್ಮರ್ ಕೆ.ಎಸ್, ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ, ಆರೋಗ್ಯ ಪರಿವೀಕ್ಷಣಾಧಿಕಾರಿ ಪ್ರಮೀಳಾ, ಬಿಇಒ ಕಛೇರಿಯ ಸಂದ್ಯಾ, ಮತ್ತಿತರರು ಉಪಸ್ಥಿತರಿದ್ದರು. ಡಾ.ನಂದಕುಮಾರ್ ಸ್ವಾಗತಿಸಿ, ವಂದಿಸಿದರು.
ಉದ್ಘಾಟನೆಗೆ ಕಟ್ಟಡಗಳು ಸಿದ್ಧ;
ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿಯಲ್ಲಿ ಎಂಡೋಪೀಡಿತರ ಪಾಲನ ಕೇಂದ್ರದ ಕಟ್ಟಡ ನಿರ್ಮಾಣ ಪೂರ್ಣಗೊಂಡಿದ್ದು, ಕೆಲ ಸೌಲಭ್ಯ, ಸಿಬ್ಬಂದಿ ನೇಮಕ ಆಗಬೇಕಿದೆ ಹಾಗೂ ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರ ಬಳಿ ನಿರ್ಮಾಣಗೊಂಡಿರುವ ಹೊರರೋಗಿ ವಿಭಾಗ ಕಟ್ಟಡದ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಬಾಕಿ ಇದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ನಂದಕುಮಾರ್ ಸಹಾಯಕ ಆಯುಕ್ತರ ಗಮನಕ್ಕೆ ತಂದರು. ಸಂಬಂಧಿಸಿದವರಲ್ಲಿ ದಿನಾಂಕ ನಿಗದಿ ಮಾಡಿ, ಉದ್ಘಾಟನೆ ಮಾಡುವ ಬಗ್ಗೆ ನಿರ್ಧರಿಸಲಾಯಿತು. ಸಿಬ್ಬಂದಿ, ಸೌಲಭ್ಯ ವ್ಯವಸ್ಥೆ ಪ್ರಸ್ತಾವನೆ ಸಲ್ಲಿಕೆಗೆ ಎಸಿ ಸೂಚಿಸಿದರು.









