ಸುಳ್ಯ:ಆಧುನಿಕ ಸುಳ್ಯದ ನಿರ್ಮಾತೃ ಡಾ.ಕುರುಂಜಿ ವೆಂಕಟ್ರಮಣ ಗೌಡರ ಪುತ್ರ, ಸುಳ್ಯದ ಅಕಾಡೆಮಿ ಆಪ್ ಲಿಬರಲ್ ಎಜ್ಯುಕೇಷನ್ನ ಅಧ್ಯಕ್ಷ ಡಾ.ಕೆ.ವಿ ಚಿದಾನಂದ ಅವರು ತಾವು ಕಲಿತ ಶಾಲೆ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಕೊಡುಗೆಯಾಗಿ ನೀಡುವ 1.5. ಕೋಟಿ ಮೌಲ್ಯದ ತರಗತಿ ಕೊಠಡಿಗಳ ಕಟ್ಟಡ ಸಮುಚ್ಛಯಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ ಡಿ.29ರಂದು ನಡೆಯಿತು. ಕಟ್ಟಡ ಸಮುಚ್ಚಯದ
ದಾನಿ ಡಾ.ಕೆ.ವಿ.ಚಿದಾನಂದ ಶಿಲಾನ್ಯಾಸ ನೆರವೇರಿಸಿದರು.
ರಾಜ್ಯ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್, ಖ್ಯಾತ ವಾಗ್ಮಿ ಎನ್.ಆರ್.ದಾಮೋದರ ಶರ್ಮ ಬಾರ್ಕೂರು,ಸರಕಾರಿ ಪದವಿ ಪೂರ್ವ ಕಾಲೇಜಿನ ಅಮೃತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಪದ್ಮಶ್ರೀ ಪುರಸ್ಕೃತರಾದ ಡಾ.ಗಿರೀಶ್ ಭಾರದ್ವಾಜ್, ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ ಕೆ.ಸೀತರಾಮ ರೈ ಸವಣೂರು, ಪ್ರಧಾನ ಕಾರ್ಯದರ್ಶಿ ಎಂ.ಬಿ ಸದಾಶಿವ, ಕೋಶಾಧಿಕಾರಿ ಅಶೋಕ ಪ್ರಭು, ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಲಿಂಗಪ್ಪ ಗೌಡ ಕೇರ್ಪಳ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಮಂಜುಳಾ ಬಡಿಗೇರ್, ಕಾಲೇಜಿನ ಪ್ರಾಂಶುಪಾಲ ಮೋಹನ ಗೌಡ ಬೊಮ್ಮೆಟ್ಟಿ, ಉಪ ಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ಅಮೃತ ಮಹೋತ್ಸವ ಸಮಿತಿಯ ಉಪಾಧ್ಯಕ್ಷ ಪಿ.ಬಿ.ಸುಧಾಕರ ರೈ, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

1.5 ಕೋಟಿ ಮೌಲ್ಯದ ಕಟ್ಟಡ ಸಮುಚ್ಚಯ:
ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಕೆ.ವಿ.ಚಿದಾನಂದ ಕಟ್ಟಡವನ್ನು ಕೊಡುಗೆಯಾಗಿ ನೀಡಿದ್ದಾರೆ. ಡಾ.ಕೆ.ವಿ.ಸಿ ಅವರು ಇದೀಗ ತಾನು ಕಲಿತ ಬೋರ್ಡ್ ಹೈಸ್ಕೂಲು, ಪದವಿ ಪೂರ್ವ ಕಾಲೇಜು ಆಗಿ ಅಮೃತ ಮಹೋತ್ಸವ ಆಚರಿಸುವ ಸಂದರ್ಭದಲ್ಲಿ ಸುಮಾರು 1.5 ಕೋಟಿ ಮೊತ್ತದ ಕಟ್ಟಡ ಸಮುಚ್ಚಯ ಕಟ್ಟಿಸಲು ಮುಂದಾಗಿದ್ದಾರೆ.ತರಗತಿ ಕಟ್ಟಡ ಸಮುಚ್ಚಯಲ್ಲಿ

ಪ್ರಥಮ ಮಹಡಿಯು ಒಟ್ಟು 5.400 ಚದರ ಅಡಿ ವಿಸ್ತೀರ್ಣ ಇರಲಿದ್ದು ತಲಾ 550 ಚದರ ಅಡಿಯ 4 ಕೊಠಡಿಗಳು, 840 ಚದರ ಅಡಿಗಳ ಕಂಪ್ಯೂಟರ್ ಲ್ಯಾಬ್ ಕೊಠಡಿ, ದ್ವಿತೀಯ ಮಹಡಿಯಲ್ಲಿ 6 ಸಾವಿರ ಚದರ ಅಡಿ ಮೆಟಲ್ ಪ್ಯಾಬ್ರಿಕೇಷನ್ ಕೊಠಡಿ ನಿರ್ಮಿಸಲಿದ್ದು 300 ಆಸನ ಸಾಮರ್ಥ್ಯವುಳ್ಳ ಸಭಾಂಗಣ, 550 ಚದರ ಅಡಿ ವಿಸ್ತೀರ್ಣದ ಪೂರ್ವ ವಿಧ್ಯಾರ್ಥಿಗಳ ಕೊಠಡಿ ನಿರ್ಮಾಣ ಆಗಲಿದೆ. ಅಲ್ಲದೆ ಇಪ್ಪತ್ತು ಸಾವಿರ ಲೀಟರ್ ಸಾಮರ್ಥ್ಯವುಳ್ಳ ಓವರ್ ಹೆಡ್ ವಾಟರ್ ಟ್ಯಾಂಕ್ ನಿರ್ಮಾಣ ಕಾರ್ಯ ನಡೆಯಲಿದೆ.

















