ಸುಳ್ಯ:ಅನ್ನದಷ್ಟೇ ಅಕ್ಷರವೂ ಮುಖ್ಯ, ಅಕ್ಷರವನ್ನು ಜೀವಶ್ವಾಸದಂತೆ ಪ್ರೀತಿಸಬೇಕು, ಉತ್ತಮ ಶಿಕ್ಷಣ ಪಡೆದು ಗ್ರಾಮೀಣ ವಿದ್ಯಾರ್ಥಿಗಳು ಐಎಎಸ್, ಐಪಿಎಸ್, ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ
ತಮ್ಮ ಬಾಳನ್ನು ಬೆಳಗುವುದರ ಜೊತೆಗೆ ನಾಡಿಗೂ ಹೆಸರು ತರಬೇಕು ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ಅಮೃತ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ, ಕಾರ್ಯಕ್ರಮದ
ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಾಲೇಜು ಕಳೆದ ಹಲವು ವರ್ಷಗಳಿಂದ ಉತ್ತಮ ಫಲಿತಾಂಶ ದಾಖಲಿಸುವ ಮೂಲಕ ಯಾವುದೇ ಸಂಸ್ಥೆಗೂ ಕಡಿಮೆ ಇಲ್ಲದಂತೆ ಬೆಳೆದು ನಿಂತಿದೆ.ಯಾವುದೇ ಸಂಸ್ಥೆ ಬೆಳಗಲು, ಬೆಳೆದು ನಿಲ್ಲಲು ಜನ ಬೆಂಬಲ ಅತ್ಯಗತ್ಯ. ಅದರಂತೆ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ಸರ್ವರ ಬೆಂಬಲ, ಸಹಕಾರದಿಂದ ಬೆಳೆದು ಬಂದಿದೆ ಎಂದು ಹೇಳಿದರು.
ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ಯಾವುದೇ ಖಾಸಗಿ ವಿದ್ಯಾಸಂಸ್ಥೆಗೆ ಕಡಿಮೆ ಇಲ್ಲದ ರೀತಿಯಲ್ಲಿ ಉತ್ತಮವಾಗಿ ಬೆಳೆದಿದೆ.ಫಲಿತಾಂಶವೂ ಚೆನ್ನಾಗಿದೆ. ಅತೀ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಇಂತಹ ಸಂಸ್ಥೆಯ ಅಮೃತಮಹೋತ್ಸವ ಆಚರಣೆ ನಮ್ಮೆಲ್ಲರ ಪಾಲಿಗೆ ಬಂದಿರುವುದು ನಮ್ಮ ಸುಯೋಗ ಎಂದರು.

ಬೆಂಗಳೂರು ಕೆ.ಎಸ್.ಇ.ಎ.ಬಿ. ಕಾರ್ಯದರ್ಶಿ ಮಲ್ಲೇಸ್ವಾಮಿ ಅವರು ಜ್ಞಾನಾಮೃತ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ವಸ್ತು ಪ್ರದರ್ಶನ ಮಳಿಗೆಯನ್ನು ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ಉದ್ಘಾಟಿಸಿದರು. ಭೋಜನಾಲಯ ಕೊಠಡಿಯನ್ನು ರೂ.13 ಲಕ್ಷ ವೆಚ್ಚದಲ್ಲಿ ನಿರ್ಮಿಸಿಕೊಡುತ್ತಿರುವ ನಿವೃತ್ತ ಅಧ್ಯಾಪಕ, ದಾನಿ ಕೃಷ್ಣ ನಾವಡ ಅವರು ಭೋಜನಾಲಯ ಕೊಠಡಿಯನ್ನು ಲೋಕಾರ್ಪಣೆ ಮಾಡಿದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಸುಳ್ಯ ತಹಶೀಲ್ದಾರ್ ಮಂಜುಳಾ ಎಂ, ಕ್ಷೇತ್ರ ಶಿಕ್ಷಣಾಧಿಕಾರಿ ಶೀತಲ್ ಯು.ಕೆ.,ಅಮೃತಮಹೋತ್ಸವ ಸಮಿತಿ ಅಧ್ಯಕ್ಷ ಸವಣೂರು ಸೀತಾರಾಮ ರೈ, ಭೋಜನಾಲಯ ಕೊಠಡಿ ದಾನಿ ಕೃಷ್ಣ ನಾವಡ,ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್, ಸುಳ್ಯ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫಾ, ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಮಂಜುಳಾ ಬಡಿಗೇರ್, ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಲಿಂಗಪ್ಪ ಗೌಡ ಕೇರ್ಪಳ, ಅಮೃತ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಬಿ.ಸದಾಶಿವ, ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಮೋಹನ್ ಗೌಡ ಬೊಮ್ಮೆಟ್ಟಿ, ಉಪಪ್ರಾಂಶುಪಾಲ ಪ್ರಕಾಶ ಮೂಡಿತ್ತಾಯ, ಹಿರಿಯ ಶಿಕ್ಷಕ ಡಾ.ಸುಂದರ ಕೇನಾಜೆ,ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ಅಮೃತ ಮಹೋತ್ಸವ ಸಮಿತಿ ಉಪಾಧ್ಯಕ್ಷ ಪಿ.ಬಿ.ಸುಧಾಕರ ರೈ, ಅಮೃತ ಮಹೋತ್ಸವ ಸ್ಮರಣ ಸಂಚಿಕೆ ಸಂಪಾದಕ ಚಂದ್ರಶೇಖರ ಪೇರಾಲು, ಅಮೃತಮಹೋತ್ಸವ ಸಮಿತಿ ಜೊತೆ ಕೋಶಾಧಿಕಾರಿ ರಾಮಚಂದ್ರ ಪಲ್ಲತ್ತಡ್ಕ, ವಿದ್ಯಾರ್ಥಿ ನಾಯಕರಾದ ಪ್ರಜ್ವಲ್ ಪಿ.ಬಿ., ಲಿಖಿತ್ ಎಂ.ಆರ್. ಮತ್ತಿತರರು ಉಪಸ್ಥಿತರಿದ್ದರು.

ಅಮೃತಮಹೋತ್ಸವ ಸಮಿತಿ ಅಧ್ಯಕ್ಷ ಸವಣೂರು ಸೀತಾರಾಮ ರೈ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಪ್ರಾಂಶುಪಾಲ ಮೋಹನ್ ಗೌಡ ಬೊಮ್ಮೆಟ್ಟಿ ವಂದಿಸಿದರು. ಶಿಕ್ಷಕಿ ಚಂದ್ರಮತಿ ಕೆ. ಕಾರ್ಯಕ್ರಮ ನಿರೂಪಿಸಿದರು.
ಶೈಕ್ಷಣಿಕ ವಸ್ತು ಪ್ರದರ್ಶನ:
ಕಾರ್ಯಕ್ರಮದ ಅಂಗವಾಗಿ ಸಂಸ್ಥೆಯ ವಠಾರದಲ್ಲಿ ಶೈಕ್ಷಣಿಕ ಸಂಬಂಧಿಸಿದಂತೆ ಕಲೆ, ವಾಣಿಜ್ಯ, ವಿಜ್ಞಾನ, ತಂತ್ರಜ್ಞಾನ ಹಾಗೂ ವ್ಯವಹಾರ ಕ್ಷೇತ್ರದ ವಸ್ತು ಪ್ರದರ್ಶನ ಮಳಿಗೆಗಳನ್ನು ಜೋಡಿಸಲಾಗಿತ್ತು. ವಿದ್ಯಾಭಿಮಾನಿಗಳು ವಸ್ತು ಪ್ರದರ್ಶನ ಮಳಿಗೆಯನ್ನು ಭೇಟಿ ಮಾಡಿ ವೀಕ್ಷಿಸಿದರು.

















