ಸುಳ್ಯ:ನಾನು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷತೆ ಸೇರಿ ಯಾವುದೇ ಹುದ್ದೆಗಳ ಆಕಾಂಕ್ಷಿ ಅಲ್ಲ, ಬ್ಲಾಕ್ ಅಧ್ಯಕ್ಷತೆ ಒಪ್ಪಿಕೊಳ್ಳಬೇಕು ಎಂದು ಹಿರಿಯ ಮುಖಂಡರು ಒತ್ತಾಯಿಸಿದ್ದರು. ಆಗ ಒಪ್ಪಿಕೊಂಡಿದ್ದೆ, ಆದರೆ ಇತ್ತೀಚಿನ ಬೆಳವಣಿಗೆ ನೋಡಿದಾಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಸೇರಿದಂತೆ ಯಾವುದೇ ಹುದ್ದೆಗೆ ನಾನು ಆಕಾಂಕ್ಷಿ ಅಲ್ಲ ಎಂದು ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ, ಹಿರಿಯ ಕಾಂಗ್ರೆಸ್ ಮುಖಂಡ ಸೋಮಶೇಖರ ಕೊಯಿಂಗಾಜೆ ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಘೋಷಿಸಿದರು.ಕೆಲವು ಮುಖಂಡರು ಪಕ್ಷದ ಶಿಸ್ತನ್ನು ಉಲ್ಲಂಘಿಸಿ ಉಚ್ಚಾಟನೆಗೆ ಒಳಗಾದವರನ್ನು ಬೆಂಬಲಿಸುವ ಮೂಲಕ ಸಂಪಾಜೆ ಗ್ರಾಮದ ಕಾಂಗ್ರೆಸ್ ಪಕ್ಷದಲ್ಲಿ ಒಡಕು ಮೂಡಿಸುತ್ತಿದ್ದಾರೆ. ಪಕ್ಷದ ಆಂತರಿಕ ಶೀತಲ ಸಮರದಿಂದ ಪಕ್ಷದ ಚಟುವಟಿಕೆ ನಡೆಸುವುದು ಕಷ್ಟವಾಗಿದೆ. ಇದರಿಂದ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಅಗಿದೆ, ಮುಂದೆಯೂ ಪಕ್ಷಕ್ಕೆ ಹಿನ್ನಢ ಆದರೆ ಒಡಕು ಸೃಷ್ಠಿಸಿದವರೇ ಜವಾಬ್ದಾರರು.ಕಳೆದ ಅನೇಕ ವರ್ಷದಿಂದ ಸಂಪಾಜೆ ವಲಯ ಕಾಂಗ್ರೆಸ್ನಲ್ಲಿ ಉಂಟಾಗಿರುವ ಆಂತರಿಕ ಕಲಹ, ಮುಸುಕಿನ ಗುದ್ದಾಟವನ್ನು ಪರಿಹರಿಸುವಲ್ಲಿ ಬ್ಲಾಕ್ ಅಥವಾ ಜಿಲ್ಲಾ ನಾಯಕತ್ವ ಸಂಪೂರ್ಣ ವಿಫಲವಾಗಿದೆ. ಉಚ್ಚಾಟನೆಗೊಂಡ ನಾಯಕರು ಬ್ಲಾಕ್ ಸಭೆಯಲ್ಲಿ, ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದರೂ ನಾಯಕರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಹೈಕಮಾಂಡ್ಗೆ ಕಾರ್ಯಕರ್ತರ ನಿರ್ಧಾರದಂತೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.

ರಾಜ್ಯಮಟ್ಟದ ನಾಯಕರಾಗಿ ಬೆಳೆದವರು ತಮ್ಮ ಗ್ರಾಮದಲ್ಲಿಯೂ ಪಕ್ಷವನ್ನು ಕಟ್ಟಿ ಬೆಳೆಸಬೇಕು, ಅವರ ಗ್ರಾಮದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಕೆಲವು ರಾಜ್ಯ ನಾಯಕರ ಗ್ರಾಮದಲ್ಲಿ ಕಾಂಗ್ರೆಸ್ಗೆ ಚುನಾವಣೆಗೆ ಸ್ಪರ್ಧೆ ಮಾಡಲು, ಬೂತ್ನಲ್ಲಿ ಕುಳಿತುಕೊಳ್ಳಲು ಜನ ಇಲ್ಲದ ಸ್ಥಿತಿ ಇದೆ. ಈ ಕುರಿತು ಪಕ್ಷ ಹಾಗೂ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.
ನೇರ ನಡೆ ನುಡಿಯ ಮುಖಂಡರಿಗೆ ಕಾಂಗ್ರೆಸ್ ಪಕ್ಷದಲ್ಲಿ ಬೆಲೆ ಇಲ್ಲದಂತಾಗಿದೆ, ಆದುದರಿಂದ ಅವರು ಅನಿವಾರ್ಯವಾಗಿ ತಟಸ್ಥರಾಗಿ ಉಳಿಯಬೇಕಾದ ಪರಿಸ್ಥಿತಿ ಬಂದಿದೆ. ದೊಂಬರಾಟ ಮಾಡುವವರಿಗೆ ಮಾತ್ರ ಅವಕಾಶ, ಸ್ಥಾನ ಮಾನ ಸಿಗುತಿದೆ. ನಾನು ಯಾಕೆ ರಾಜಿನಾಮೆ ನೀಡುತ್ತಿದ್ದೇನೆ ಎಂಬುದರ ಬಗ್ಗೆ ಸಭೆ ಕರೆದು ಗ್ರಾಮದ ಕಾರ್ಯಕರ್ತರಿಗೆ, ಜನರಿಗೆ ವಿವರಿಸುತ್ತೇನೆ. ತಾನು ಪಲಾಯನ ಮಾಡುತ್ತಿಲ್ಲ, ಬದಲಾಗಿ ಸ್ವಯಂ ನಿವೃತ್ತನಾಗುತ್ತಿದ್ದೇನೆ, ಬೇರೆ ಯಾವುದೇ ಪಕ್ಷಕ್ಕೆ ಹೋಗುವುದಿಲ್ಲ, ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದ ಅವರು ಸಹಕಾರಿ ಕ್ಷೇತ್ರದಲ್ಲಿ ಮಾತ್ರ ಮುಂದುವರಿಯುತ್ತೇನೆ ಎಂದರು.
ಬಿಜೆಪಿ ಪಕ್ಷದಲ್ಲಿ ಇರುವವರು ಎಲ್ಲರೂ ಆತ್ಮೀಯರೇ ಹಾಗೆಂದು ಅವರು ಕರೆದರೂ ಅವರ ಪಕ್ಷಕ್ಕೆ ಹೋಗುವುದಿಲ್ಲ, ಕಾಂಗ್ರೆಸ್ ಪಕ್ಷ ಸಾಕಷ್ಟು ಅವಕಾಶ ನೀಡಿದೆ, ಆದುದರಿಂದ ಯಾವ ಕಾರಣಕ್ಕೂ ಪಕ್ಷ ಬಿಡುವುದಿಲ್ಲ, ಕಾಂಗ್ರೆಸ್ ಸಾಮಾನ್ಯ ಕಾರ್ಯಕರ್ತನಾಗಿ ಮುಂದುವರಿಯುತ್ತೇನೆ ಎಂದು ಸೋಮಶೇಖರ ಕೊಯಿಂಗಾಜೆ ಹೇಳಿದರು. ಗ್ರಾಮೀಣ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಿ ಪಂಚಾಯತ್, ಸಹಕಾರಿ ಸಂಘಗಳಲ್ಲಿ ಅಧಿಕಾರ ಪಡೆದರೂ ಕೆಲವು ಮುಖಂಡರು ಕಾಲೆಳೆಯುವ ಪ್ರವೃತ್ತಿ ಮಾಡುತ್ತಾರೆ,ಕಾಂಗ್ರೆಸ್ ಸರಕಾರ ಅನುದಾನ ನೀಡಿದರೂ ಅದರ ಶಿಲಾನ್ಯಾಸಕ್ಕೆ ಕಾಂಗ್ರೆಸ್ ಸಚಿವರನ್ನು, ಕಾಂಗ್ರೆಸ್ ಮುಖಂಡರನ್ನು ಕಡೆಗಣಿಸುತ್ತಾರೆ. ಈ ರೀತಿಯ ಬೆಳವಣಿಗೆ ನೋವು ತಂದಿದೆ ಎಂದು ಅವರು ಹೇಳಿದರು.
ಸಂಪಾಜೆ ಗ್ರಾಮದ ಅಭಿವೃದ್ಧಿಗೆ ಎಲ್ಲಾ ನಾಯಕರು, ಕಾಂಗ್ರೆಸ್ ಜನಪ್ರತಿನಿಧಿಗಳು ಅನುದಾನ ತಂದಿದ್ದಾರೆ. ತಾನು ಯಾರನ್ನೂ ಕಡೆಗಣಿಸುವುದಾಗಲೀ, ತಾರತಮ್ಯ ಮಾಡುವುದಾಗಲಿ ಮಾಡಿಲ್ಲ. ಒಬ್ಬ ಅಲ್ಪ ಸಂಖ್ಯಾತನಿಗೆ ಅನ್ಯಾಯ ಆದಾಗ ಭೂನ್ಯಾಯ ಮಂಡಳಿ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದೇನೆ, ಗ್ರಾಮದಲ್ಲಿ ಜಾತ್ಯಾತೀತವಾಗಿ ಎಲ್ಲರನ್ನೂ ಬೆಳೆಸಿದ್ದೇನೆ ಎಂದು ಅವರು ಬೊಟ್ಟು ಮಾಡಿದರು.












