ಮಂಗಳೂರು: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳನ್ನು ಉದ್ಯಮಶೀಲತೆಯತ್ತ ಸೆಳೆಯುವ ಹಾಗೂ ಅವರಿಗೆ ಭವಿಷ್ಯದಲ್ಲಿ ಸ್ವಂತ ಉದ್ಯಮ ಸ್ಥಾಪಿಸಲು ಬೇಕಾಗುವ ಅಗತ್ಯ ಮಾರ್ಗದರ್ಶನ ನೀಡುವ ದೃಷ್ಟಿಯಿಂದ ಮಂಗಳೂರಿನಲ್ಲಿ ಫೆ.28ರಂದು‘ಪ್ರೇರಣಾ-2026’ ಉದ್ಯಮಶೀಲತಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.ಮಂಗಳೂರಿನ ಎಸ್ಡಿಎಂ ಕಾನೂನು ಪದವಿ ಕಾಲೇಜಿನಲ್ಲಿ
ಈ ಸಮಾವೇಶ ನಡೆಯಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಎಸ್ಸಿ/ಎಸ್ಟಿ ಯುವ ಸಮುದಾಯದಲ್ಲಿ ಸ್ವಂತ ಉದ್ಯಮ ಸ್ಥಾಪಿಸುವ ಕನಸು, ಕೌಶಲ್ಯ, ಸಾಮರ್ಥ್ಯ ಹೊಂದಿರುವ ಅನೇಕ ಐಟಿಐ, ಡಿಪ್ಲೋಮಾ ಹಾಗೂ ಎಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿಗಳಿದ್ದಾರೆ. ಅಂಥವರಿಗೆ ಉದ್ಯಮ ಸ್ಥಾಪಿಸುವುದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಹಲವು ಯೋಜನೆ- ಸವಲತ್ತುಗಳು ಲಭ್ಯವಿದೆ. ಈ ಯೋಜನೆಗಳ ಬಗ್ಗೆ ಅಗತ್ಯ ಮಾಹಿತಿ, ಬ್ಯಾಂಕ್ನಿಂದ ಲಭ್ಯವಿರುವ ಸಾಲ-ಸೌಲಭ್ಯಗಳ ಬಗ್ಗೆ ಪ್ರೇರಣಾ ಸಮಾವೇಶದಲ್ಲಿ ಮಾರ್ಗದರ್ಶನ ನೀಡಲಾಗುವುದು.
ಈ ಹಿನ್ನಲೆಯಲ್ಲಿ ಹೆಚ್ಚಿನ ಸಂಖ್ಯೆಯ ಎಸ್ಸಿ/ಎಸ್ಟಿ ಸಮುದಾಯದ ವಿದ್ಯಾರ್ಥಿಗಳು ಈ ಸಮಾವೇಶದಲ್ಲಿ ಭಾಗವಹಿಸಬೇಕೆಂದು ಅವರು ಹೇಳಿದ್ದಾರೆ. ‘ಬೊಲ್ಪು’ ಮತ್ತು SC/ST ಅಧ್ಯಯನ ಹಾಗೂ ಅಭಿವೃದ್ಧಿ ಟ್ರಸ್ಟ್ ಸಹಯೋಗದೊಂದಿಗೆ ಈ ಪ್ರೇರಣಾ ಸಮಾವೇಶ ಹಮ್ಮಿಕೊಳ್ಳಲಾಗಿದೆ.ಈ ಪ್ರೇರಣಾ ಸಮಾವೇಶವನ್ನು ಮಂಗಳೂರು ವಿ.ವಿ ಕುಲಪತಿ ಪ್ರೊ. ಪಿ.ಎಲ್. ಧರ್ಮ ಉದ್ಘಾಟಿಸಲಿದ್ದಾರೆ. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಎಸ್ಡಿಎಂ ವಿದ್ಯಾ ಸಂಸ್ಥೆ ಸಿಇಒ ಪೂರಣ್ ವರ್ಮಾ, ಎಸ್ ಸಿ ಎಸ್ಟಿ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಮೋಹನಾಂಗಯ್ಯ ಸ್ವಾಮಿ, ವಾದಿರಾಜ್ ಸಾಮರಸ್ಯ, ದಲಿತ ಉದ್ದಿಮೆದಾರರ ಸಂಘದ ಕಾರ್ಯಾಧ್ಯಕ್ಷ ಸಿಜಿ ಶ್ರೀನಿವಾಸ್ ಮುಂತಾದವರು ಭಾಗವಹಿಸಲಿದ್ದಾರೆ ಎಂದರು.








