ಸುಳ್ಯ: ಸಾವಿರಾರು ಮಂದಿ ಕಾರ್ಯಕರ್ತರ ಅಶ್ರುತರ್ಪಣ ಹಾಗು ಮೊಳಗಿದ ಪ್ರವೀಣ್ ಬಾಯ್ ಅಮರ್ ರಹೇ.. ಉದ್ಘೋಷದ ಮಧ್ಯೆ ಬೆಳ್ಳಾರೆಯಲ್ಲಿ ನಿನ್ನೆ ರಾತ್ರಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರ ಪಾರ್ಥೀವ ಶರೀರದ ಅಂತಿಮ ಸಂಸ್ಕಾರ ನಡೆಯಿತು. ನೆಟ್ಟಾರಿನ ಅವರ ಮನೆಯಲ್ಲಿ ನಡೆದ ಅಂತ್ಯ ಸಂಸ್ಕಾರ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿ
ಅಂತಿಮ ನಮನ ಸಲ್ಲಿಸಿದರು. ಪುತ್ತೂರಿನಿಂದ ನೆಟ್ಟಾರು ತನಕ ಪಾರ್ಥೀವ ಶರೀರದ ಅಂತಿಮ ಯಾತ್ರೆ ನಡೆಯಿತು. ಸಾವಿರಾರು ಮಂದಿ ಅಂತಿಮ ಯಾತ್ರೆಯಲ್ಲಿ ನೆರೆದಿದ್ದರು. ಇಂದು ಬೆಳಿಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದ ಬಳಿಕ ಮೃತದೇಹವನ್ನು ಮನೆಯವರಿಗೆ ಬಿಟ್ಟುಕೊಡಲಾಯಿತು.
ಪುತ್ತೂರಿನಿಂದ ದರ್ಬೆ, ಸವಣೂರು, ಕಾಣಿಯೂರು, ನಿಂತಿಕಲ್ಲು ಮಾರ್ಗವಾಗಿ ಪಾರ್ಥೀವ ಶರೀರವನ್ನು ಹೊತ್ತ ಆಂಬ್ಯುಲೆನ್ಸ್ ಬಂತು. ಹಲವಾರು ದ್ವಿಚಕ್ರ ಹಾಗೂ ಚತುಶ್ಚಕ್ರ ವಾಹನಗಳು ಮೆರವಣಿಗೆಯಲ್ಲಿ ಸಂಚರಿಸಿದವು.ನಿಂತಿಕಲ್ಲಿನಲ್ಲಿ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಅಲ್ಲಿಂದ ಬೃಹತ್ ವಾಹನ

ಮೆರವಣಿಗೆಯಲ್ಲಿ ಬೆಳ್ಳಾರೆಗೆ ಕರೆತರಲಾಯಿತು.ಬೆಳ್ಳಾರೆ ಪೇಟೆಯಲ್ಲಿ ಭಾರೀ ಜನದಟ್ಟಣೆ ಮತ್ತು ವಾಹನ ದಟ್ಟಣೆ ಉಂಟಾಯಿತು. ಬೆಳ್ಳಾರೆ ಬಸ್ ನಿಲ್ದಾಣದ ಮುಂಭಾಗದಲ್ಲಿ ಮೃತದೇಹವನ್ನು ಅಂತಿಮ ದರ್ಶನಕ್ಕೆ ಇರಿಸುವ ವ್ಯವಸ್ಥೆ ಮಾಡಲಾಗಿತ್ತು. ಸಚಿವರಾದ ಎಸ್.ಅಂಗಾರ, ಸುನಿಲ್ಕುಮಾರ್, ಸಂಸದ ನಳಿನ್ಕುಮಾರ್ ಕಟೀಲ್, ಶಾಸಕರಾದ ಸಂಜೀವ ಮಠಂದೂರು, ಹರೀಶ್ ಪೂಂಜಾ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಡಾ. ಪ್ರಭಾಕರ ಭಟ್ ಕಲ್ಲಡ್ಕ,ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ನ. ಸೀತಾರಾಮ ಸೇರಿದಂತೆ ಅನೇಕ ಗಣ್ಯರು ಆಗಮಿಸಿದ್ದರು.ಪಾರ್ಥೀವ ಶರೀರಕ್ಕೆ ಪುಷ್ಪಾಂಜಲಿ ಅರ್ಪಿಸಲಾಯಿತು. ರಾಮ ನಾಮ ಜಪಿಸಲಾಯಿತು. ಬಳಿಕ ಪಾರ್ಥೀವ ಶರೀರವನ್ನು ನೆಟ್ಟಾರಿನ ಮನೆಗೆ ಕೊಂಡೊಯ್ಯಲಾಯಿತು. ಮನೆಯಲ್ಲಿ ಅಂತಿಮ ವಿಧಿವಿಧಾನದ ಬಳಿಕ ಅಂತ್ಯ ಸಂಸ್ಕಾರ ನಡೆಯಿತು. ಸೇರಿದಂತೆ ಪ್ರವೀಣ್ ಅವರ ಸ್ನೇಹಿತರು, ಬಂಧುಗಳು, ಅಭಿಮಾನಿಗಳು, ಬಿಜೆಪಿ ಮುಖಂಡರು, ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.