ಸುಳ್ಯ:ವಿಬಿ ಜಿ ರಾಮ್ ಜಿ ಯೋಜನೆ ಒಕ್ಕೂಟದ ವ್ಯವಸ್ಥೆಯಡಿಯಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಭ್ರಷ್ಟಾಚಾರ ತಡೆಯುವ ನಿಟ್ಟಿನಲ್ಲಿ ಒಂದಷ್ಟು ಬದಲಾವಣೆ ಮಾಡಲಾಗಿದೆ. ಆದರೆ ರಾಜ್ಯ ಸರ್ಕಾರದ ವೈಫಲ್ಯ ಮರೆಮಾಚಲು ಕಾಂಗ್ರೆಸ್ ಈ ಯೋಜನೆ ವಿರುದ್ಧ ಬೀದಿಗಿಳಿದು ಹೋರಾಟ ಮಾಡುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಆರೋಪಿಸಿದರು.ಅವರು ಸುಳ್ಯದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಈ ಯೋಜನೆ ಕುರಿತು
ಸಂಸತ್ ನಲ್ಲಿ ಚರ್ಚೆ ಮಾಡುವ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದರು ಎಲ್ಲಿ ಇದ್ದರು. ಆಗ ವಿರೋಧ ಮಾಡದ ಕಾಂಗ್ರೆಸ್ ಈಗ ಯಾಕೆ ವಿರೋಧ ಎಂದು ಪ್ರತಾಪ್ ಸಿಂಹ ನಾಯಕ್ ಪ್ರಶ್ನಿಸಿದರು. ಕಾಂಗ್ರೆಸ್ ಸತತವಾಗಿ ಮೂರು ಬಾರಿ ಕೇಂದ್ರದಲ್ಲಿ ಅಧಿಕಾರ ವಂಚಿತರಾಗಿ ಒಂದು ಹತಾಶ ಭಾವನೆ ಮೂಡಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಕಾಂಗ್ರೆಸ್ ವೈಫಲ್ಯದ ಕಾರಣಕ್ಕೆ ಜನರಿಂದ ತಿರಸ್ಕರಿಸಲ್ಪಟ್ಟಿದ್ದಾರೆ. ಇದನ್ನು ತಾವು ವಿಮರ್ಶೆ ಮಾಡಿಕೊಳ್ಳುವುದರ ಬದಲು ಹತಾಶರಾಗಿ ಕೇಂದ್ರ ಸರ್ಕಾರ ತರುವ ಪ್ರತಿಯೊಂದು ಕಾರ್ಯಕ್ರಮಗಳಿಗೂ ಅಪಪ್ರಚಾರವನ್ನು ಮಾಡುವುದರ ಮೂಲಕ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡ್ತಾ ಇದ್ದಾರೆ ಎಂದು ಟೀಕಿಸಿದರು.
ಭಾರತೀಯ ಜನತಾ ಪಾರ್ಟಿ ನೇತೃತ್ವದ ನರೇಂದ್ರ ಮೋದಿ ಸರಕಾರ ಮಹಾತ್ಮ ಗಾಂಧೀಜಿಯವರ ಬಗ್ಗೆ ಅಪಾರ ಗೌರವ ಇಟ್ಟು ಆ ಕಾರಣಕ್ಕೆ ಮಹಾತ್ಮ ಗಾಂಧೀಜಿಯವರ ಕನಸನ್ನು ನನಸು ಮಾಡುವ ದೃಷ್ಟಿಯಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪುವಂತಹ ದೃಷ್ಟಿಯಲ್ಲಿ 10 ಹಲವು ಯೋಜನೆಗಳನ್ನ ತಂದಿದ್ದಾರೆ. ಆ ಕಾರಣಕ್ಕೆ ಗ್ರಾಮಾಂತರದ ಜನರ ಬದುಕಿನ ಮಟ್ಟ ಹೆಚ್ಚಾದಂತಹ ಹಿನ್ನೆಲೆಯಲ್ಲಿ ವಿಶ್ವ ಸಂಸ್ಥೆಯಿಂದ ಹಿಡಿದು ಬೇರೆ ಬೇರೆ ಸಮೀಕ್ಷೆಗಳಲ್ಲಿ ಕೇಂದ್ರ ಸರ್ಕಾರಕ್ಕೆ ಗೌರವ ಸಿಕ್ಕಿದೆ ಎಂದು ಅವರು ಹೇಳಿದರು.
ಆಯಾ ಗ್ರಾಮಕ್ಕೆ ಬೇಕಾಗುವಂತಹ ಯೋಜನೆಯನ್ನು ಗ್ರಾಮಗಳ ಗ್ರಾಮ ಸಭೆಯೇ ನಿರ್ಧಾರ ಮಾಡಿ ಅಭಿವೃದ್ಧಿ ಕಾಣುವ ರೀತಿಯಲ್ಲಿ ಯೋಜನೆಗಳು ರೂಪಿತವಾಗಿದೆ. ರಾಜ್ಯದಲ್ಲೀ ಸರ್ಕಾರ ಅತ್ಯಂತ ಕೆಟ್ಟ ಸ್ಥಿತಿಗೆ ತಲುಪಿದೆ. ಅನುದಾನ ಇಲ್ಲ. ವಿಶೇಷ ಅಧಿವೇಶನ ಕೇಂದ್ರದ ವಿರುದ್ಧ ಗೂಬೆ ಕೂರಿಸಿ ತಮ್ಮ ವೈಫಲ್ಯ ಮರೆಮಾಚಲು ಮಾಡಿದ ತಂತ್ರ. ಅವರ ಗ್ಯಾರಂಟಿಗಳೇ ವಿಫಲವಾಗಿವೆ ಎಂದು ಪ್ರತಾಪ್ ಸಿಂಹ ನಾಯಕ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ವಿನಯಕುಮಾರ್ ಕಂದಡ್ಕ, ಸುಬೋಧ್ ಶೆಟ್ಟಿ ಮೇನಾಲ, ವಿನಯ ಮುಳುಗಾಡು, ಬುದ್ದ ನಾಯ್ಕ, ಸೋಮನಾಥ ಪೂಜಾರಿ ಇದ್ದರು.







