ಮಂಗಳೂರು: ಒಮ್ಮಿಂದೊಮ್ಮೆಲೆ ಬಂದೆರಗುವ ಪ್ರಾಕೃತಿಕ ವಿಕೋಪವನ್ನು ತಡೆಯಲು ಸಾಧ್ಯವಿಲ್ಲ, ಆದರೆ ಹಿಂದಿನ ವರ್ಷಗಳ ಅನುಭವದ ಆಧಾರದ ಮೇಲೆ ಜನಸಾಮಾನ್ಯರಿಗೆ ಆಗಬಹುದಾದ ಕಷ್ಟ ನಷ್ಟಗಳನ್ನು ಕಡಿಮೆ ಮಾಡಲು, ಜಾನುವಾರುಗಳನ್ನು ರಕ್ಷಿಸಲು, ಸೂಕ್ತ ಸಮಯದಲ್ಲಿ ಸ್ಪಂದಿಸಲು ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ತಂಡ ಸದಾ ಸಿದ್ಧವಿರಬೇಕು ಎಂದು ರಾಜ್ಯ ವಿಧಾನ ಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಅವರು ಮೇ. 29ರ ಸೋಮವಾರ ನಗರದ ಕದ್ರಿಯ ಸಕ್ರ್ಯೂಟ್ ಹೌಸ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಸಿದ್ಧತೆ ಕುರಿತಂತೆ ಹಮ್ಮಿಕೊಂಡಿದ್ದ
ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗಳಲ್ಲೂ ತಳಮಟ್ಟದಲ್ಲಿ ಅಧಿಕಾರಿ, ಸಿಬ್ಬಂದಿಗಳ ತಂಡವನ್ನು ಈಗಲೇ ಸಿದ್ಧಪಡಿಸಬೇಕು, ಪ್ರಾಕೃತಿಕ ವಿಕೋಪಗಳಿಂದ ಒದಗಬಹುದಾದ ಸಂಭವನೀಯ ಅಪಾಯಗಳನ್ನು ತಡೆಗಟ್ಟುವ ಬಗ್ಗೆ ಕ್ರಮಗಳನ್ನು ಕೈಗೊಳ್ಳಬೇಕು, ಚಿಕ್ಕಮಗಳೂರು, ಕೊಡಗು ಹಾಗೂ ಸಕಲೇಶಪುರ ವ್ಯಾಪ್ತಿಯಲ್ಲಿ ಹೆಚ್ಚು ಮಳೆಯಾದರೆ ಅಧಿಕ ಪ್ರಮಾಣದ ನೀರು ಜಿಲ್ಲೆಗೆ ಹರಿದು ಬರಲಿದೆ ಆಗ ಸಮಸ್ಯೆ ಎದುರಾಗಲಿದೆ, ಕುಮಾರಧಾರ ಸಂಗಮ ಮುಳುಗಡೆಯಾಗುತ್ತದೆ. ಅಲ್ಲದೆ ನದಿಗಳು ಸಮುದ್ರ ಸೇರುವ ಪ್ರದೇಶಗಳಲ್ಲಿ ಪ್ರವಾಹದ ಭೀತಿ ಎದುರಾಗುತ್ತದೆ. ಈ ಸಂದರ್ಭದಲ್ಲಿ ಸ್ಥಳೀಯರಿಗೆ ಪ್ರತಿದಿನ ಜಾಗೃತಿ ಮೂಡಿಸಿ, ಯಾವುದೇ ಹಾನಿಯಾಗದಂತೆ ಉಸ್ತುವಾರಿ ವಹಿಸಬೇಕಾಗುತ್ತದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಗುಡ್ಡ ಕುಸಿತ, ಮನೆ ಅಥವಾ ಕಾಂಪೌಂಡ್ ಕುಸಿತ ಪ್ರಕರಣಗಳು ವರದಿಯಾದಾಗ, ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಿಗ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಸಾರ್ವಜನಿಕರಲ್ಲಿ ಸರ್ಕಾರ ನಿಮ್ಮೊಂದಿಗೆ ಇದೆ ಎಂಬ ಮಾನಸಿಕ ಬೆಂಬಲ ನೀಡಬೇಕು ಹಾಗೂ ಕೂಡಲೇ ಹತ್ತು ಸಾವಿರ ರೂ.ಗಳ ತುರ್ತು ಪರಿಹಾರ ನೀಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ರವಿಕುಮಾರ್ ಎಂ. ಆರ್. ಅವರು ಈ ಹಿಂದೆ ಜಿಲ್ಲೆಯಲ್ಲಿ ಜರುಗಿದ ಪ್ರಾಕೃತಿಕ ವಿಕೋಪ ವಿಕೋಪಗಳ ಆಧಾರದ ಮೇಲೆ ಈಗಾಗಲೇ 87 ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದೆ, ಸಂತ್ರಸ್ತರ ಸ್ಥಳಾಂತರ ಸೇರಿದಂತೆ ಅಲ್ಲಿ ಊಟ, ಉಪಹಾರ ಸೇರಿದಂತೆ ಎಲ್ಲಾ ರೀತಿಯ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ, ಎಸ್ ಡಿ ಆರ್ ಎಫ್ ನ ತಂಡಗಳು ಸಿದ್ದವಿದ್ದು, ಎನ್ ಡಿ ಆರ್ ಎಫ್ ತಂಡ ಆಗಮಿಸಬೇಕಿದೆ, ಜಿಲ್ಲೆಗೆ ಮುಂಗಾರು ಜೂನ್ 4ಕ್ಕೆ ಪ್ರವೇಶವಾಗಲಿದ್ದು, ಜೂನ್ 1ಕ್ಕೆ ಎಲ್ಲಾ ರೀತಿಯ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡು ಸನ್ನದ್ದ ಸ್ಥಿತಿಯಲ್ಲಿರಲಾಗುವುದು, ವಿಕೋಪ ಅಥವಾ ಪ್ರವಾಹದಿಂದ ಹಾನಿಯಾದರೆ ಕೂಡಲೇ ಪರಿಹಾರ ನೀಡಲು ಜಿಲ್ಲೆಯ ಎಲ್ಲಾ ತಹಶೀಲ್ದಾರರಿಗೆ ಮೂರುವರೆ ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಲಾಗಿದೆ, ಇನ್ನು ಹೆಚ್ಚಿನ ಹಣ ಬಿಡುಗಡೆಗೆ ಈಗಾಗಲೇ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ಪೀಕರ್ ಅವರು ಅನುದಾನ ಬಿಡುಗಡೆಗೆ ಸಂಬಂಧಪಟ್ಟ ಸಚಿವರಿಗೆ ತಿಳಿಸಲಾಗುವುದು, ವಿಕೋಪಗಳಿಂದ ಮನೆ ಹಾನಿಯಾದಾಗ ಗ್ರಾಮ ಲೆಕ್ಕಕ್ಕೆ ಹಾಗೂ ಕಂದಾಯ ನಿರೀಕ್ಷಕರು ಕೂಡಲೇ ಅಲ್ಲಿಗೆ ಭೇಟಿ ನೀಡಿ ಅವರಿಗೆ ಮಾನಸಿಕ ಬೆಂಬಲ ನೀಡುವುದರೊಂದಿಗೆ ತುರ್ತು ಪರಿಹಾರವನ್ನು ನೀಡಬೇಕು, ಪರಿಹಾರಕ್ಕೆ ವರದಿ ನೀಡುವ ಸಂಬಂಧಪಟ್ಟ ಇಲಾಖೆಗಳ ಎಂಜಿನಿಯರ್ಗಳು ಕೂಡ ಸ್ಥಳಕ್ಕೆ ಭಾವಿಸಿ ಆದ ಹಾನಿಯ ಅಂದಾಜನ್ನು ಪರಿಶೀಲಿಸಿ ವರದಿಯನ್ನು ಸಲ್ಲಿಸಬೇಕು ಎಂದು ಹೇಳಿದರು.
ಪ್ರಾಕೃತಿಕ ವಿಕೋಪಗಳಿಂದಾಗುವ ಹಾನಿ, ಸಮಸ್ಯೆಗಳನ್ನು ಪರಿಹರಿಸುವ ಸಂದರ್ಭದಲ್ಲಿ ಸ್ಥಳೀಯ ಸಂಘ-ಸಂಸ್ಥೆಗಳ ಯುವಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ತಂಡವನ್ನು ಸಿದ್ಧಪಡಿಸಿ ಎಸ್ ಡಿ ಆರ್ ಎಫ್ ಹಾಗೂ ಎನ್ ಡಿ ಆರ್ ಎಫ್ ತಂಡದೊಂದಿಗೆ ನಿಯೋಜಿಸಬೇಕು ಇದಕ್ಕಾಗಿ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಧಿಕಾರಿಗಳು ಸಭೆಯೊಂದನ್ನು ನೆಡೆಸಿ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಅಗ್ನಿಶಾಮಕ ಪಡೆ, ಆರೋಗ್ಯ ಇಲಾಖೆಯ ಆಂಬುಲೆನ್ಸ್ಗಳು ಸನ್ನದ್ದವಾಗಿರಬೇಕು, ಲೋಕೋಪಯೋಗಿ ಇಲಾಖೆ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ವತಿಯಿಂದ ರಸ್ತೆಗಳಲ್ಲೂ ಗುಂಡಿಗಳನ್ನು ಮುಚ್ಚುವ ಕೆಲಸವಾಗಬೇಕು, ಮಳೆಗಾಲದಲ್ಲಿ ಅವು ದೊಡ್ಡ ಹೊಂಡಗಳಾಗುವ ಸಾಧ್ಯತೆಗಳಿದ್ದು ಒಂದು ವಾರದೊಳಗೆ ರಸ್ತೆಯಲ್ಲಿನ ಗುಂಡಿಗಳನ್ನು ಕೂಡಲೇ ಮುಚ್ಚುವಂತೆ ಸೂಚನೆ ನೀಡಿದರು.
ಅದೇ ರೀತಿ ರಾಷ್ಟ್ರೀಯ ಹೆದ್ದಾರಿ, ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರಸ್ತೆಗಳ ಬದಿಗಳಲ್ಲಿರುವ ಪೆÇದೆಗಳ ಸವರುವ ಕೆಲಸ ಮಾಡಿ, ರಸ್ತೆಯಲ್ಲಿ ನೀರು ನಿಲ್ಲದಂತೆ, ನೀರಿನ ಸರಾಗ ಹರಿವಿಗೆ ವ್ಯವಸ್ಥೆ ಮಾಡಿಕೊಡಬೇಕು, ಇದು ಏಳು ದಿನದೊಳಗೆ ಆಗಬೇಕು, ಯಾರಾದರೂ ಮಳೆ ನೀರನ್ನು ಹರಿಯಲು ಅಡ್ಡಪಡಿಸಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು, ಮಳೆಯ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಪ್ರಮುಖವಾಗಿ ಮೆಸ್ಕಾಂನವರು ಅರಣ್ಯ ಇಲಾಖೆಯೊಂದಿಗೆ ಸೇರಿಕೊಂಡು ಅಪಾಯಕಾರಿ ಗಿಡ ಮರಗಳನ್ನು ತೆರವುಗೊಳಿಸುವುದು ಹಾಗೂ ವಿದ್ಯುತ್ ತಂತಿಗಳು ಹಾದು ಹೋಗಿರುವ ಕಡೆಗಳಲ್ಲಿರುವ ಮರ ಗಿಡಗಳ ಅಪಾಯಕಾರಿ ರಂಬೆ ಕೊಂಬೆಗಳನ್ನು ಕತ್ತರಿಸಬೇಕು, ವಿದ್ಯುತ್ ತಂತಿಗಳು ಬಿದ್ದು ಯಾವುದಾದರೂ ಪ್ರಾಣ ಹೋದಲ್ಲಿ ಸಂಬಂಧಪಟ್ಟ ಮೆಸ್ಕಾಂನ ಜೂನಿಯರ್ ಇಂಜಿನಿಯರ್ ಹಾಗೂ ಅರಣ್ಯ ಇಲಾಖೆಯ ರೇಂಜ್ ಆಫೀಸರ್ ಗಳನ್ನು ನೇರವಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಡಲ್ಕೊರೆತಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸ್ಪೀಕರ್ ಅವರು ಮನೆ ಅಥವಾ ಯಾವುದೇ ಹಾನಿಯಾಗುವುದಕ್ಕೆ ಮುನ್ನ ಎಚ್ಚೆತ್ತುಕೊಂಡು ಕೆಲಸ ಮಾಡುವಂತೆ ಬಂದರು ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ಎಲ್ಲಾ ಸ್ಥಳೀಯ ಸಂಸ್ಥೆಗಳು ಹೆಲ್ಪ್ ಲೈನ್ ಪ್ರಾರಂಭಿಸಬೇಕು 24 ಗಂಟೆಯೂ ಅಲ್ಲಿ ಕಾರ್ಯ ನಿರ್ವಹಿಸಬೇಕು, ಮುಂಗಾರು ಆರಂಭಗೊಂಡ ಸಂದರ್ಭದಿಂದಲೇ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚರಿಕೆಯಿಂದ ತಂಡವಾಗಿ ಕೆಲಸ ಮಾಡಿದ್ದಲ್ಲಿ ಪ್ರಾಕೃತಿಕ ವಿಕೋಪಗಳ ಹಾನಿಗಳನ್ನು ಕಡಿಮೆ ಮಾಡಬಹುದಾಗಿದೆ, ಸರ್ಕಾರದ ಮಟ್ಟದಲ್ಲಿ ಯಾವುದೇ ಸಹಕಾರ ಬೇಕಾದಲ್ಲಿ ತಿಳಿಸುವಂತೆ ಸೂಚಿಸಿದ ಸ್ಪೀಕರ್ ಅವರು ಯಾವುದೇ ಸಂದರ್ಭದಲ್ಲಿ ಅಧಿಕಾರಿಗಳು ಸತ್ಯ ವಿಚಾರಗಳನ್ನೇ ತಿಳಿಸಬೇಕು ತಳಮಟ್ಟದ ಅಧಿಕಾರಿಗಳು ಶ್ರಮವಹಿಸಿ ಕೆಲಸ ಮಾಡಬೇಕು ಸರ್ಕಾರದ ನಿರೀಕ್ಷೆಗಳಿಗೆ ಅನುಗುಣವಾಗಿ ಉತ್ತಮ ಕೆಲಸ ಮಾಡಿ, ಜಿಲ್ಲಾಡಳಿತಕ್ಕೆ ಉತ್ತಮ ಹೆಸರು ತರುವಂತೆ ಅವರು ಹೇಳಿದರು.
ಶಾಸಕರಾದ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಮಂಗಳೂರು ಪೆÇಲೀಸ್ ವಿಭಾಗದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅನ್ಶುಕುಮಾರ್, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಸಹಾಯಕ ಆಯುಕ್ತರಾದ ರಾಜು, ಗಿರೀಶ್ ನಂದನ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲಾ ತಹಶೀಲ್ದಾರರು ಸಭೆಯಲ್ಲಿ ಭಾಗವಹಿಸಿದ್ದರು.