ಬೆಂಗಳೂರು:ಈಗ ರಾಜ್ಯದಲ್ಲಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯ 32,000 ಮೆಗಾವಾಟ್ನಷ್ಟಿದೆ. 2031ರ ವೇಳೆಗೆ 60,000 ಮೆಗಾವಾಟ್ಗಳಿಗೆ ಹೆಚ್ಚಿಸುವ ಗುರಿ ಇದೆ’‘ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯನ್ನು ಮುಂದಿನ ಏಳು ವರ್ಷಗಳಲ್ಲಿ 28,000 ಮೆಗಾ ವಾಟ್ನಷ್ಟು ಹೆಚ್ಚಿಸುವ ಗುರಿ ಇದೆ. ಇದಕ್ಕಾಗಿ ಸಿದ್ಧತೆಗಳನ್ನು ಆರಂಭಿಸಲಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ನಗರದ ಹೆಬ್ಬಾಳದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಶನಿವಾರ ‘ರೈತ ಸೌರಶಕ್ತಿ ಮೇಳ’ ಉದ್ಘಾಟಿಸಿದ
ಅವರು, ‘ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಉತ್ಪಾದನೆಯೂ ಹೆಚ್ಚಬೇಕು. 2013ರಲ್ಲಿ ತಮ್ಮ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗ ಉತ್ಪಾದನಾ ಸಾಮರ್ಥ್ಯ 14,000 ಮೆಗಾವಾಟ್ ಇತ್ತು. ಐದು ವರ್ಷಗಳಲ್ಲಿ ಅದನ್ನು 28,000 ಮೆಗಾವಾಟ್ಗೆ ಏರಿಸಲಾಗಿತ್ತು.
ಸೌರವಿದ್ಯುತ್ ಉತ್ಪಾದನೆ, ಬಳಕೆಯಲ್ಲಿನ ಹೊಸ ತಂತ್ರಜ್ಞಾನಗಳನ್ನು ರೈತರು ಬಳಸಿಕೊಳ್ಳಬೇಕು. ಸೌರವಿದ್ಯುತ್ ಚಾಲಿತ ಪಂಪ್ಗಳ ಬಳಕೆಗೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಇಂಧನ ಸಚಿವ ಕೆ.ಜೆ. ಜಾರ್ಜ್, ‘ಪ್ರಧಾನಮಂತ್ರಿ ಕುಸುಮ್ ಯೋಜನೆಯಡಿ ಕೃಷಿ ನೀರಾವರಿಗೆ ಸೌರವಿದ್ಯುತ್ ಚಾಲಿತ ಪಂಪ್ ಅಳವಡಿಕೆಗೆ ವೆಂಡರ್ಗಳನ್ನು ಗುರುತಿಸಲಾಗಿದೆ. ಮೊಬೈಲ್ ಆ್ಯಪ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು’ ಎಂದರು.
ಸೌರವಿದ್ಯುತ್ ಚಾಲಿತ ಪಂಪ್ಗಳ ಪ್ರಾತ್ಯಕ್ಷಿಕೆಯನ್ನು ಆಯೋಜಿಸಲಾಗಿತ್ತು. 20ಕ್ಕೂ ಹೆಚ್ಚು ಕಂಪನಿಗಳು ಸೌರವಿದ್ಯುತ್ ಉತ್ಪಾದನಾ ಕಿರು ಘಟಕಗಳು, ಅವುಗಳಿಂದ ನೀರೆತ್ತುವ ಪಂಪ್ಗಳ ಕಾರ್ಯನಿರ್ವಹಣೆಯ ಪ್ರಾತ್ಯಕ್ಷಿಕೆ ಒದಗಿಸಿದ್ದವು. ಸಾವಿರಾರು ರೈತರು ಮಾಹಿತಿ ಪಡೆದರು.ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ಡಿ. ರಾಜೇಗೌಡ ಮಾತನಾಡಿದರು.














