ಸುಳ್ಯ: ಡಾ.ಪೂವಪ್ಪ ಕಣಿಯೂರು ಅವರ “ಅಚ್ಚಗನ್ನಡ ಗಾರುಡಿಗ ವಿದ್ವಾನ್ ಕೊಳಂಬೆ ಪುಟ್ಟಣ್ಣ ಗೌಡ” ಕೃತಿ ಬಿಡುಗಡೆ ಕಾರ್ಯಕ್ರಮ ಸುಳ್ಯದ ಸಂಧ್ಯಾರಶ್ಮಿ ಸಾಹಿತ್ಯ ಸಂಘದ ವತಿಯಿಂದ ಸುಳ್ಯ ಸಂಧ್ಯಾರಶ್ಮಿ ಸಭಾಂಗಣದಲ್ಲಿ ರವಿವಾರ ನಡೆಯಿತು.ಹಿರಿಯ ಸಾಹಿತಿ ಡಾ.ರಮಾನಂದ ಬನಾರಿ ಮಂಜೇಶ್ವರ ಅವರು ಕೃತಿ ಬಿಡುಗಡೆ ಮಾಡಿ ಮಾತನಾಡಿ, ಕೊಳಂಬೆ ಅವರ ಬಗೆಗಿನ
ಕೃತಿಗೆ ಅರ್ಥಪೂರ್ಣ ಹೆಸರು ನೀಡಲಾಗಿದೆ. ಭಾವಪೂರ್ಣ ಭಾವಚಿತ್ರವನ್ನು ಅಳವಡಿಸಲಾಗಿದೆ. ಇದರಲ್ಲಿ ಅವರ ವ್ಯಕ್ತಿತ್ವ ಹೃದಯಾಂಗಮವಾಗಿ ಮೂಡಿಬಂದಿದೆ. ಕೊಳಂಬೆ ಅವರು ಎಷ್ಟೋ ವಿಷಯಗಳಲ್ಲಿ ಸಾಧನೆ ಮಾಡಿರಬಹುದು. ನನಗೆ ಮೂರು ವರ್ಷದ ಶಿಕ್ಷಣ ನೀಡಿದ ಸಮಯದಲ್ಲಿ ನನ್ನ ಬದುಕನ್ನೇ ರೂಪಿಸಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಹೆಸರಾಗಿದ್ದು, ಜೀವಂತವಾಗಿ ಉಳಿಯುವ ಸಾಧನೆ ಮಾಡಿದ್ದಾರೆ. ವಸ್ತು, ವಿಷಯ, ನಿರ್ವಹಣೆ, ಮಾಧ್ಯಮ ಮುಂತಾದ ಜನಪರ ಮಹಾಕಾವ್ಯವನ್ನು ನೀಡಿದ್ದಾರೆ ಎಂದು ಅವರು ಹೇಳಿದರು.
ಅಧ್ಯಾಪಕ ಮತ್ತು ಲೇಖಕ ಅರವಿಂದ ಚೊಕ್ಕಾಡಿ ಅವರು ಕೃತಿ ಪರಿಚಯ ಮಾಡಿದರು. ಕೊಳಂಬೆ ಪುಟ್ಟಣ್ಣ ಗೌಡರ ಬಗೆಗಿನ ಕೃತಿ ಅವರ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟು ಹಾಕಲು ಪೂರಕವಾಗಿದೆ ಎಂದರು.
ಸಂಧ್ಯಾರಶ್ಮಿ ಸಾಹಿತ್ಯ ಉಪಾಧ್ಯಕ್ಷ ಕೆ.ಆರ್.ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ಕುತ್ಯಾಳ ನಾಗಪ್ಪ ಗೌಡ, ಸುಳ್ಯ ತಾಲೂಕು ಪಿಂಚಣಿದಾರರ ಸಂಘದ ಅಧ್ಯಕ್ಷ ಡಾ.ರಂಗಯ್ಯ ಮತ್ತಿತರರು ಉಪಸ್ಥಿತರಿದ್ದರು. ಕೃತಿ ರಚನೆಕಾರ ಡಾ.ಪೂವಪ್ಪ ಕಣಿಯೂರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸಂಘದ ಸದಸ್ಯೆ ಡಾ.ವೀಣಾ ವಂದಿಸಿದರು. ಸಂಘದ ಕಾರ್ಯದರ್ಶಿ ಕುಮಾರಸ್ವಾಮಿ ತೆಕ್ಕುಂಜ ಕಾರ್ಯಕ್ರಮ ನಿರೂಪಿಸಿದರು.




