ಸುಳ್ಯ:ರಾಜ್ಯ ವಿಧಾನಸಭಗೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆಗೆ ದಿನಗಣನೆ ಆರಂಭವಾಗಿದ್ದು ಒಂದೆರಡು ದಿನದಲ್ಲಿ ರಾಜ್ಯದ ಬಹುತೇಕ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯಾಗುವ ಸಾಧ್ಯತೆ ಇದೆ. ಈ ಬಾರಿ ತೀವ್ರ ಕುತೂಹಲ ಕೆರಳಿಸಿರುವ ಸುಳ್ಯ ಕ್ಷೇತ್ರದ ಅಭ್ಯರ್ಥಿ ಘೋಷಣೆ ಪ್ರಥಮ ಪಟ್ಟಿಯಲ್ಲಿ ಆಗಲಿದೆ ಎಂದು ನಿರೀಕ್ಷಿಸಲಾಗಿದೆ. ಸುಳ್ಯ ಕ್ಷೇತ್ರದ ಅಭ್ಯರ್ಥಿತನಕ್ಕಾಗಿ 6 ಮಂದಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದರೂ ಹೆಚ್.ಎಂ.ನಂದಕುಮಾರ್ ಅಥವಾ ಜಿ.ಕೃಷ್ಣಪ್ಪ ಇವರಲ್ಲಿ ಒಬ್ಬರಿಗೆ ಸೀಟ್ ಸಿಗುವುದು ಖಚಿತ ಎಂದೇ ಹೇಳಲಾಗುತಿದೆ. ಈ ಇಬ್ಬರು ನಾಯಕರು
ಟಿಕೆಟ್ ಸಿಗುವ ಭರವಸೆಯನ್ನು ವ್ಯಕ್ತಪಡಿಸಿ ಆತ್ಮವಿಶ್ವಾಸದಲ್ಲಿದ್ದಾರೆ. ಆದುದರಿಂದಲೇ ಅದೃಷ್ಠ ಯಾರಿಗೆ ಒಲಿಯಲಿದೆ ಎಂಬ ಕುತೂಹಲ ಗರಿಗೆದರಿದೆ. ಟಿಕೆಟ್ ಖಚಿತ ಆಗಿದೆ ಎಂಬ ನೆಲೆಯಲ್ಲಿ ಇಬ್ಬರೂ ನಾಯಕರ ಆಪ್ತ ವಲಯದ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಸುಳ್ಯ ಕ್ಷೇತ್ರದಲ್ಲಿ ಪಕ್ಷಕ್ಕಾಗಿ ಇಬ್ಬರೂ ನಾಯಕರು ಸಕ್ರೀಯರಾಗಿ ಕೆಲಸ ಮಾಡಿದ್ದಾರೆ ಮತ್ತು ಅಭ್ಯರ್ಥಿ ಆಕಾಂಕ್ಷಿಗಳಾಗಿದ್ದಾರೆ. ಕ್ಷೇತ್ರದಲ್ಲಿ ತಮ್ಮ ಕೆಲಸ ಕಾರ್ಯದ ಹಿನ್ನಲೆಯಲ್ಲಿ ಅಭ್ಯರ್ಥಿ ಆಕಾಂಕ್ಷಿಗಳಾಗಿದ್ದು ಟಿಕೆಟ್ ಸಿಗುವ ಭರವಸೆ ಇದೆ ಎಂದು ನಂದಕುಮಾರ್ ಹಾಗು ಜಿ.ಕೃಷ್ಣಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಸುಳ್ಯ ಕ್ಷೇತ್ರದಲ್ಲಿ ಇಬ್ಬರು ಪ್ರಬಲ ಆಕಾಂಕ್ಷಿಗಳಾಗಿರುವ ಕಾರಣ ಪಕ್ಷದ ಹೈಕಮಾಂಡ್ ಅಳೆದು ತೂಗಿ ಒಬ್ಬರನ್ನು ಘೋಷಿಸಲಿದ್ದಾರೆ. ಬಿಜೆಪಿಯ ಭದ್ರ ಕೋಟೆಯಾಗಿರುವ ಸುಳ್ಯ ಕ್ಷೇತ್ರವನ್ನು 30 ವರ್ಷಗಳ ಬಳಿಕ ಮರಳಿ ಪಡೆಯಬೇಕು ಎಂದು ಪಣ ತೊಟ್ಟಿರುವ ಕಾಂಗ್ರೆಸ್ ಈ ಬಾರಿ ಸಮರ್ಥ ಅಭ್ಯರ್ಥಿಯನ್ನೇ ಕಣಕ್ಕಿಳಿಸಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಾರೆ.

ಸರ್ವೇ ಮಾನದಂಡ:
ರಾಜ್ಯದಲ್ಲಿ ಅಧಿಕಾರ ಪಡೆಯಲು ಶತಾಯ ಗತಾಯ ಪ್ರಯತ್ನ ನಡೆಸುತ್ತಿರುವ ಕಾಂಗ್ರೆಸ್ ಈ ಬಾರಿ ಬಹುಮತ ಪಡೆಯಲು ಎಲ್ಲಾ ತಂತ್ರಗಳನ್ನೂ ರೂಪಿಸಿದೆ. ಗೆಲುವಿನ ಸಾಧ್ಯತೆ, ಅಭ್ಯರ್ಥಿಗಳ ಬಗ್ಗೆ ಪ್ರತಿ ಕ್ಷೇತ್ರದಲ್ಲಿಯೂ ಎಐಸಿಸಿ ಹಾಗು ಕೆಪಿಸಿಸಿ 3-4 ಬಾರಿ ವಿವಿಧ ಹಂತಗಳಲ್ಲಿ ಸರ್ವೆ ಕಾರ್ಯ ನಡೆಸಿದೆ. ನಾಯಕರಿಂದ, ಕಾರ್ಯಕರ್ತರಿಂದ, ಮತದಾರರಿಂದ ಅಭಿಪ್ರಾಯ ಸಂಗ್ರಹಿಸಿದೆ. ಈ ಸರ್ವೆ ವರದಿಯ ಆಧಾರದಲ್ಲಿ, ಗೆಲುವಿನ ಸಾಧ್ಯತೆಯನ್ನು ಪರಿಗಣಿಸಿ ಪಕ್ಷದ ಹಿರಿಯರು, ನಾಯಕರು ಕುಳಿತು ಚರ್ಚಿಸಿ ಅಭ್ಯರ್ಥಿ ಫೈನಲ್ ಮಾಡಲಾಗಿದೆ ಘೋಷಣೆಯಷ್ಟೇ ಉಳಿದಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳುತ್ತಾರೆ. ಸುಮಾರು 170 ಕ್ಷೇತ್ರಗಳಲ್ಲಿ ಅಭ್ಯರ್ಥಿ ಪಟ್ಟಿ ಅಂತಿಮವಾಗಿದ್ದು ಪ್ರಥಮ ಹಂತದಲ್ಲಿ125ಕ್ಕೂ ಹೆಚ್ಚು ಸ್ಥಾನಗಳ ಅಭ್ಯರ್ಥಿ ಘೋಷಣೆಯಾಗುವ ಸಾಧ್ಯತೆ ಇದೆ. ಸುಳ್ಯ ಕ್ಷೇತ್ರದ ಅಭ್ಯರ್ಥಿ ಪ್ರಥಮ ಪಟ್ಟಿಯಲ್ಲಿ ಘೋಷಣೆಯಾಗುವ ನಿರೀಕ್ಷೆಯನ್ನು ಸುಳ್ಯದ ಕಾಂಗ್ರೆಸ್ ಮುಖಂಡರು ವ್ಯಕ್ತಪಡಿಸಿದ್ದಾರೆ. ಸುಳ್ಯ ಸೇರಿ ಜಿಲ್ಲೆಯ 5 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಫೈನಲ್ ಆಗಿದೆ ಎಂದು ಹೇಳಲಾಗುತಿದೆ.

ಹೊಸ ಅಭ್ಯರ್ಥಿ ಗೆಲುವು ತರುವುದೇ:
ಮೀಸಲು ಕ್ಷೇತ್ರವಾದ ಸುಳ್ಯದಲ್ಲಿ ಕಳೆದ ನಾಲ್ಕು ಬಾರಿ ಅಭ್ಯರ್ಥಿಯಾಗಿದ್ದ ಡಾ.ಬಿ.ರಘು ಅವರು ಈ ಬಾರಿ ಅಭ್ಯರ್ಥಿತನಕ್ಕೆ ಅರ್ಜಿ ಸಲ್ಲಿಸಿಲ್ಲ.ಆದುದರಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಈ ಬಾರಿ ಹೊಸ ಮುಖ ಬರುವುದು ಖಚಿತವಾಗಿರುವ ಹಿನ್ನಲೆಯಲ್ಲಿ ಅಭ್ಯರ್ಥಿಗಳಾಗಲು ಹಲವು ಮಂದಿ ಆಕಾಂಕ್ಷಿಗಳಿದ್ದರು.ಅಭ್ಯರ್ಥಿ ಆಕಾಂಕ್ಷಿಗಳಾಗಿ 6 ಮಂದಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದರು. ಕೆಪಿಸಿಸಿ ಸದಸ್ಯ ಹಾಗು ಕಡಬ ಬ್ಲಾಕ್ ಉಸ್ತುವಾರಿ ಹೆಚ್.ಎಂ.ನಂದಕುಮಾರ್, ಕೆಪಿಸಿಸಿ ಸುಳ್ಯ ಬ್ಲಾಕ್ ಉಸ್ತುವಾರಿ ಜಿ.ಕೃಷ್ಣಪ್ಪ, ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಕಾರ್ಪೋರೇಟರ್ ಅಪ್ಪಿ, ಮಂಗಳೂರಿನ ಶರತ್ಚಂದ್ರ,
ಯುವ ಕಾಂಗ್ರೆಸ್ ಮುಖಂಡರಾದ ಅಭಿಷೇಕ್ ಬೆಳ್ಳಿಪ್ಪಾಡಿ, ಪ್ರಹ್ಲಾದ್ ಬೆಳ್ಳಿಪ್ಪಾಡಿ ಅರ್ಜಿ ಸಲ್ಲಿಸಿದ ಪ್ರಮುಖರು.
ಇವರಲ್ಲಿ ಎಚ್.ಎಂ.ನಂದಕುಮಾರ್ ಮತ್ತು ಜಿ.ಕೃಷ್ಣಪ್ಪ ಅವರ ಹೆಸರು ಸಾಧ್ಯತಾ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ಮಡಿಕೇರಿ ನಗರ ಸಭೆಯ ಮಾಜಿ ಅಧ್ಯಕ್ಷ, ಉದ್ಯಮಿ ಹಾಗು ಕೆಪಿಸಿಸಿ ಸದಸ್ಯರಾಗಿರುವ ಹೆಚ್.ಎಂ. ನಂದಕುಮಾರ್ ಕೆಪಿಸಿಸಿ ಸಂಯೋಜಕರಾಗಿ ಸುಳ್ಯ ಕ್ಷೇತ್ರದ ಭಾಗವಾದ ಕಡಬ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿಯಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಸುಳ್ಯ ಕ್ಷೇತ್ರದಲ್ಲಿ ಪಕ್ಷ ಸಂಘಟನೆ, ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಪಿಸಿಸಿ ಸಂಯೋಜಕರಾದ ಜಿ.ಕೃಷ್ಣಪ್ಪ ಅವರು ಸುಳ್ಯ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉದ್ಯಮಿಯಾಗಿರುವ ಜಿ.ಕೃಷ್ಣಪ್ಪ ಅವರು ಕಳೆದ ಹಲವು ವರ್ಷಗಳಿಂದ ಪಕ್ಷ ಸಂಘಟನೆ ಹಾಗು ಸಾಮಾಜಿಕ ಕ್ಷೇತ್ರದಲ್ಲಿ ಸಕ್ರೀಯರಾಗಿದ್ದಾರೆ.

3 ದಶಕಗಳ ಅಧಿಕಾರದ ಅಜ್ಞಾತವಾಸ:
ಒಂದು ಕಾಲದಲ್ಲಿ ಕಾಂಗ್ರೆಸ್ನ ಭದ್ರಕೋಟೆ ಆಗಿದ್ದ ಎಲ್ಲಾ ಅಧಿಕಾರ ಸ್ಥಾನಗಳನ್ನೂ ಪಡೆದಿದ್ದ ಸುಳ್ಯದಲ್ಲಿ ಕಾಂಗ್ರೆಸ್ಗೆ ಆ ಪ್ರಾಬಲ್ಯ ನಷ್ಟವಾಗಿ ದಶಕಗಳೇ ಕಳೆದಿದೆ. ಸುಳ್ಯ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರು ಆಯ್ಕೆಯಾಗದೆ 3 ದಶಕಗಳೇ ಸಂದಿದೆ.1994ರ ಬಳಿಕ ನಿರಂತರ 6 ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿಲ್ಲ.2013ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ರಘು ಅವರು ಗೆಲುವಿನ ಸನಿಹಕ್ಕೆ ಬಂದಿದ್ದರೂ ಜಯ ಕೈ ತಪ್ಪಿತ್ತು. ಕೇವಲ 1270 ಮತಗಳ ಅಂತರದಲ್ಲಿ ಅಂದು ಕಾಂಗ್ರೆಸ್ಗೆ ಸೋಲಾಗಿತ್ತು.ಇದೀಗ ಮೂರು ದಶಕಗಳ ಗೆಲುವಿನ ಬರ ನೀಗಿಸಲು ಕಾಂಗ್ರೆಸ್ ಟೊಂಕ ಕಟ್ಟಿ ನಿಂತಿದೆ.ಈ ಬಾರಿ ಗೆಲುವು ಅನಿವಾರ್ಯ ಎಂಬ ನೆಲೆಯಲ್ಲಿ ಕಾಂಗ್ರೆಸ್ ಹೊಸ ಅಭ್ಯರ್ಥಿಯೊಂದಿಗೆ ಚುನಾವಣಾ ಕಣಕ್ಕೆ ಇಳಿಯಲಿದೆ. ಅಧಿಕಾರವಿಲ್ಲದ ಮೂರು ದಶಕಗಳ ಅಜ್ಞಾತವಾಸ ಈ ಬಾರಿ ನೀಗುವುದೇ ಎಂಬ ಪ್ರಶ್ನೆ ಪಕ್ಷದ ಮುಂದಿದೆ.