ಸುಳ್ಯ: ಅಧ್ಯಕ್ಷರ ನೇಮಕಾತಿ ಹಿನ್ನಲೆಯಲ್ಲಿ ಬಿಜೆಪಿ ಮುಖಂಡರು ಸಭೆ ನಡೆಸಿ ಅಸಹಾಕಾರ ಘೋಷಣೆ ಮಾಡಿರುವುದು, ಕಾರ್ಯಕರ್ತರು ಕಚೇರಿಗೆ ಬೀಗ ಜಡಿದಿರುವುದು ಇಂದಿನ ಸುಳ್ಯದ ಪ್ರಮುಖ ಸುದ್ದಿ. ದಶಕದ ಹಿಂದೆಯೂ ಸುಳ್ಯ ಬಿಜೆಪಿಯಲ್ಲಿ ಅಂತಹಾ ಒಂದು ಬೆಳವಣಿಗೆ ನಡೆದಿತ್ತು. 2012ರಲ್ಲಿ ರಾಜ್ಯ ನೇತೃತ್ವದೊಂದಿಗೆ ಮುನಿಸಿಕೊಂಡು ಸುಳ್ಯ ಬಿಜೆಪಿ ಮಂಡಲ ಸಮಿತಿ ಅಸಹಾಕಾರ ಚಳುವಳಿ ಘೋಷಿಸಿತ್ತು. ಸುಮಾರು
ಒಂದು ತಿಂಗಳ ಕಾಲ ಬಿಜೆಪಿ ಕಚೇರಿ ಬಂದ್ ಕೂಡ ಆಗಿತ್ತು. 2011-12 ಕಾಲ ಘಟ್ಟವದು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಡಿ.ವಿ. ಸದಾನಂದ ಗೌಡರು ಮುಖ್ಯಮಂತ್ರಿ ಸ್ಥಾನದಿಂದ ಇಳಿದು ಜಗದೀಶ್ ಶೆಟ್ಟರ್ ನೇತೃತ್ವದ ಮಂತ್ರಿಮಂಡಲ ಅಧಿಕಾರಕ್ಕೆ ಏರಿದ ಸಂದರ್ಭ.
(2008-2013 ಅವಧಿಯಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರದಲ್ಲಿ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ, ಜಗದೀಶ್ ಶೆಟ್ಟರ್ ಹೀಗೆ 3 ಮಂದಿ ಮುಖ್ಯಮಂತ್ರಿಯಾಗಿದ್ದರು)

ಡಿ.ವಿ.ಸದಾನಂದ ಗೌಡರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾವಣೆ ಮಾಡಿರುವುದಕ್ಕೆ ಸುಳ್ಯದಲ್ಲಿ ಅಸಮಾಧಾನ ಬುಗಿಲೆದ್ದಿತ್ತು. ಪ್ರತಿಭಟನೆಯೂ ನಡೆದಿತ್ತು. ಜೊತೆಗೆ ಶೆಟ್ಟರ್ ಸರಕಾರದಲ್ಲಿ ಅಂದಿನ ಶಾಸಕರಾಗಿದ್ದ ಎಸ್.ಅಂಗಾರ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಬೇಡಿಕೆ ಇತ್ತು. ಆದರೆ ಅದೂ ಈಡೇರಿರಲಿಲ್ಲ. ಜೊತೆಗೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ 25 ಕೋಟಿ ಅನುದಾನ ಘೋಷಣೆ ಮಾಡಿದ್ದರು. ಆದರೆ ವರ್ಷ ಹಲವು ಕಳೆದರೂ ಆ ಅನುದಾನ ಬಿಡುಗಡೆ ಆಗಿರಲಿಲ್ಲ.
ಈ ಎಲ್ಲಾ ಕಾರಣಗಳಿಂದ ಇಲ್ಲಿ ಭಾರೀ ಅಸಮಾಧಾನ ಉಂಟಾಗಿತ್ತು. ಅಂದು ಸುಳ್ಯದ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷರಾಗಿದ್ದ ವೆಂಕಟ್ ದಂಬೆಕೋಡಿ, ಪ್ರಧಾನ ಕಾರ್ಯದರ್ಶಿ ಪಿಜಿಎಸ್ಎನ್ ಪ್ರಸಾದ್ ಅವರ ನೇತೃತ್ವದಲ್ಲಿ ಅಸಹಾಕಾರ ಚಳುವಳಿ ಘೋಷಿಸಿತ್ತು. ಕಚೇರಿ ಬಂದ್ ಮಾಡಲಾಗಿತ್ತು. ಅಂದು ಅದು ದೊಡ್ಡ ರಾಜ್ಯಮಟ್ಟದ ಸುದ್ದಿಯಾಗಿತ್ತು. ಬಳಿಕ ರಾಜ್ಯ ನಾಯಕರು ಮಧ್ಯ ಪ್ರವೇಶಿಸಿ ಮಾತುಕತೆ ನಡೆಸಿ ಯಡಿಯೂರಪ್ಪ ಸರಕಾರ ಘೋಷಣೆ ಮಾಡಿದ್ದ ಅನುದಾನ ಬಿಡುಗಡೆ ಮಾಡಿದ್ದರು. ಘೋಷಣೆ ಮಾಡಿದ್ದ 25 ಕೋಟಿಯಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ಸುಮಾರು 15 ಕೋಟಿ ಅನುದಾನ ಬಿಡುಗಡೆ ಮಾಡಿಸುವಲ್ಲಿ ಅಂದಿನ ಆ ಅಸಹಕಾರ ಚಳುವಳಿ ಯಶಸ್ವಿಯಾಗಿತ್ತು..!









