*ಚಂದ್ರಾವತಿ ಬಡ್ಡಡ್ಕ.
224 ಸದಸ್ಯ ಬಲವುಳ್ಳ 16ನೇ ಕರ್ನಾಟಕ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದ್ದು 2023ರ ಮೇ ಹತ್ತನೇ ತಾರಿಕಿನಂದು ಒಂದೇ ಹಂತದಲ್ಲಿ ರಾಜ್ಯಾದ್ಯಂತ ಮತದಾನ ನಿಕ್ಕಿಯಾಗಿದೆ. ಚುನಾವಣಾ ಕಣವು ರಂಗೇರಲಿದ್ದು ಮತದಾರರನ್ನು ಒಲಿಸಿಕೊಳ್ಳಲು ಎಲ್ಲಾ ಪಕ್ಷಗಳು ರಂಗಿತರಂಗ ಆಟಗಳನ್ನು ಆಡಲಿರುವುದು ನಿಚ್ಚಳ. ರಾಜ್ಯದ ಕೆಲವು ಕ್ಷೇತ್ರಗಳಿಗೆ ಪಕ್ಷಗಳು ಈಗಾಗಲೇ ಅಭ್ಯರ್ಥಿಗಳನ್ನು ನಿಗದಿ ಮಾಡಿದ್ದರೆ,ಉಳಿದ ಕ್ಷೇತ್ರಗಳಿಗೆ ಇನ್ನಷ್ಟೇ ಆಗಬೇಕಿದೆ. ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಎಂಬ ಅಗ್ಗಳಿಕೆ ಹೊಂದಿರುವ ಭಾರತದ

ಪ್ರಮುಖ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ.
ರಾಜ್ಯದಲ್ಲಿ ಹಾಲಿ ಬಿಜೆಪಿ ಹಿಡಿತದಲ್ಲಿರುವ ಅಧಿಕಾರವನ್ನು ಕಸಿದುಕೊಳ್ಳಲು ಕಾಂಗ್ರೆಸ್ ಹವಣಿಕೆಯಲ್ಲಿದೆ. ಈ ನಡುವೆ ಕಿಂಗ್ ಮೇಕರ್ ಆಗಲು ಜೆಡಿಎಸ್ ಎಂದಿನಂತೆ ಆಖಾಡಕ್ಕಿಳಿಯಲಿದೆ. ದೆಹಲಿ ಹಾಗೂ ಪಂಜಾಬ್ನಲ್ಲಿ ಅಧಿಕಾರ ಹಿಡಿದಿರುವ ಆಮ್ ಆದ್ಮಿ ಪಕ್ಷವೂ ಕರ್ನಾಟಕದಲ್ಲಿ ಗೂಟ ಊರುವ ಪ್ರಯತ್ನಕ್ಕೆ ಮುಂದಾಗಿದೆ. ಏನಾಗುತ್ತದೆ ಎಂಬುದು ಕುತೂಹಲಕಾರಿ ಅಂಶ.
ಬಿಜೆಪಿ ಪಕ್ಷವನ್ನೇ ಮತ್ತೆ ಅಧಿಕಾರಕ್ಕೆ ತರಬೇಕೆಂಬ ಉಮೇದು ಬಿಜೆಪಿಯದ್ದು. ಇತ್ತಿತ್ತಲಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ಕರ್ನಾಟಕ ಭೇಟಿಗೆ ಕಾರ್ಯಕ್ರಮಗಳು ಹೆಚ್ಚುತ್ತಿವೆ. ಭಾರತ್ ಜೋಡೋ ಯಾತ್ರೆ ಹಮ್ಮಿಕೊಂಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಕಾಲ್ನಡಿಗೆ ಯಾತ್ರೆವೇಳೆ ಕಾಂಗ್ರೆಸ್ಸಿಗರನ್ನು ಹುರಿದುಂಬಿಸಿ ಹೋಗಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ಮತ್ತೊಮ್ಮೆ ಹಾಲಿಯಾಗಬೇಕೆಂದು ಬಿಜೆಪಿ ಮತ್ತು ಕಾಂಗ್ರೆಸ್ಸ್ನ ಹುಳುಕುಗಳನ್ನು ಹೆಕ್ಕುತ್ತಿದ್ದಾರೆ. ಆಮ್ ಆದ್ಮಿ ಪಕ್ಷದ ದೆಹಲಿ ಶಾಸಕಿ ಕರ್ನಾಟಕಕ್ಕೆ ಬಂದು ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ಕಾಂಗ್ರೆಸ್ಗಳೆರಡಕ್ಕೂ ಬಯ್ದು ಹೋಗಿದ್ದಾರೆ. ಆದರೆ ಮತದಾರ ಪ್ರಭು ಏನು ಮಾಡಲಿದ್ದಾನೆ ಎಂಬುದು ಕುತೂಹಲ.

224 ವಿಧಾನ ಸಭಾ ಕ್ಷೇತ್ರಗಳ ಪೈಕಿ ಒಟ್ಟು 30 ಜಿಲ್ಲೆಗಳಲ್ಲಿ 51 ಕ್ಷೇತ್ರಗಳು ಮೀಸಲಾತಿ ವ್ಯಾಪ್ತಿಯಲ್ಲಿ ಬರುತ್ತವೆ. ಇವುಗಳಲ್ಲಿ ಪರಿಶಿಷ್ಠ ಜಾತಿಗೆ 36 ಮತ್ತು ಪರಿಶಿಷ್ಠ ಪಂಗಡಕ್ಕೆ 15 ಕ್ಷೇತ್ರಗಳು ಮೀಸಲು. ಇದರ ವ್ಯಾಪ್ತಿಗೆ ನಮ್ಮ ಸುಳ್ಯ ವಿಧಾನ ಸಭಾಕ್ಷೇತ್ರವು ಬರುತ್ತಿದ್ದು ಸುಳ್ಯ ಕ್ಷೇತ್ರವು ಪ್ರಸ್ತುತ ಪರಿಶಿಷ್ಠ ಜಾತಿಗೆ ಮೀಸಲಾಗಿದೆ. ಸುಳ್ಯ ಕ್ಷೇತ್ರದಿಂದ ಕಾಂಗ್ರೆಸ್ ಒಟ್ಟು ಆರು ಬಾರಿ, ಬಿಜೆಪಿ ಏಳು ಬಾರಿ, ಸ್ವತಂತ್ರ ಪಾರ್ಟಿ ಒಂದು ಬಾರಿ ಹಾಗೂ ಜನತಾ ಪಾರ್ಟಿ ಒಂದು ಬಾರಿ ಗೆದ್ದಿದೆ. ಒಂದು ಕಾಲದಲ್ಲಿ ಸುಳ್ಯದ ಟ್ರೆಂಡ್ ಹೇಗಿತ್ತೆಂದರೆ ಯಾರೇ ಕಾಂಗ್ರೆಸ್ಸಿನಿಂದ ಸ್ಫರ್ಧಿಸಿದರೆ ಗೆಲುವು ಗ್ಯಾರೆಂಟಿ ಎಂಬಂತಿತ್ತು. ಈಗ ಅದು ಉಲ್ಟವಾಗಿದೆ. ಕಳೆದ ಆರು ಚುನಾವಣೆಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದು ಮ್ಯಾರಥಾನ್ ರೇಸ್ನಲ್ಲಿರುವ ಎಸ್. ಅಂಗಾರರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಾಖಲೆ ಬರೆದಿದ್ದಾರೆ.
ಸತತವಾಗಿ ಗೆಲ್ಲುತ್ತಲೇ ಬಂದರೂ ಗೆದ್ದು ಗೆದ್ದು ಗೆದ್ದೂ 27ನೇ ವರ್ಷಕ್ಕೆ ಅಂಗಾರರು ಸಚಿವರಾದರು. ಕೈ ಬಾಯಿ ಶುದ್ಧವಿರುವ ಶಾಸಕರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸರಳ, ಸಜ್ಜನ ವ್ಯಕ್ತಿತ್ವದ ಅಂಗಾರರನ್ನೇ ಮುಂದುವರಿಸಬೇಕು ಎಂದು ಬಿಜೆಪಿಯ ಒಂದು ಬಣ ಹೇಳಿದರೆ, ಬದಲಾದ ಸನ್ನಿವೇಶಕ್ಕೆ ಮತ್ತು ಕ್ಷೇತ್ರದ ಅಗತ್ಯಕ್ಕೆ ತಕ್ಕಂತೆ ರಾಶನಲ್ ಆಗಿ ಕಾರ್ಯವೆಸಗುವ ಶಾಸಕರ ಅಗತ್ಯ ಸುಳ್ಯ ಕ್ಷೇತ್ರಕ್ಕಿದೆ ಎಂದು ಇನ್ನೊಂದು ಬಣ ಹೇಳುತ್ತಿದೆ. ಅಂಗಾರರು ಮಾತ್ರ ಪಕ್ಷ ಇಚ್ಛಿಸಿದರೆ ಇನ್ನೊಮ್ಮೆ ಸ್ಫರ್ಧಿಸಲು ಸಿದ್ಧ ಎಂಬುದಾಗಿ ತಣ್ಣಗೆ ಹೇಳಿ ನಿರ್ಲಿಪ್ತವಾಗಿದ್ದಾರೆ.

ಕಾಂಗ್ರೆಸ್ ಪಕ್ಷ ಇದೀಗಾಗಲೇ ಸುಳ್ಯಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಿಸಿದೆ. ಜಿ.ಕೃಷ್ಣಪ್ಪ ಅವರ ಹೆಸರನ್ನು ಪಕ್ಷ ಸೂಚಿಸಿದ್ದು ಆಗಲೇ ಅಸಮಾಧಾನದ ಹೊಗೆ ಎದ್ದಿದೆ. ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ನಂದಕುಮಾರ್ ಅವರಿಗೇ ಟಿಕೆಟ್ ಎಂಬ ವಿಶ್ವಾಸದಲ್ಲಿದ್ದ ತಳಮಟ್ಟದ ಕಾರ್ಯಕರ್ತರಿಗೆ ಕಾಂಗ್ರೆಸ್ ಕಣ್ಣಕ್ಕಿಳಿಸಲು ಬಯಸಿರುವ ಅಭ್ಯರ್ಥಿ ಪಥ್ಯವಾಗಿಲ್ಲ. ಹಾಗಾಗಿ ಅಭ್ಯರ್ಥಿಯನ್ನು ಬದಲಿಸಲು ನಾಯಕರ ಮೇಲೆ ಒತ್ತಡ ಹೇರುತ್ತಿದ್ದರೆ, ನಾಯಕರು ಕಾರ್ಯಕರ್ತರ ಮನಒಲಿಸಲು ಮುಂದಾಗಿದ್ದಾರೆ.
ಹಾಗಾದರೆ ಯಾರು ಈ ಜಿ.ಕೃಷ್ಣಪ್ಪ ಮತ್ತು ಮುಂದಿನ ಬಾರಿಯೂ ಅಂಗಾರರೇ ಕಣಕ್ಕಿಳಿಯಲಿದ್ದಾರಾ? ಮುಂದಿನ ವಾರ ನೋಡೋಣ!
ಇದು ವರೆಗಿನ ಸುಳ್ಯ ಕ್ಷೇತ್ರದ ಶಾಸಕರ ವಿವರ
1952 (ಮದ್ರಾಸ್ ಅಸೆಂಬ್ಲಿಗೆ ಎಸ್ಟಿ ಮೀಸಲು) ಕೆ. ಈಶ್ವರ (ಕಾಂಗ್ರೆಸ್)
1957 (ಎಸ್ಟಿ ಮೀಸಲು ಸುಬ್ಬಯ್ಯ ನಾಯ್ಕ) ಕಾಂಗ್ರೆಸ್
1962 (ಎಸ್ಟಿ ಮೀಸಲು ಸುಬ್ಬಯ್ಯ ನಾಯ್ಕ) ಕಾಂಗ್ರೆಸ್
1967 (ಎಸ್ಸಿ ಮೀಸಲು) ಎ. ರಾಮಚಂದ್ರ (ಸ್ವತಂತ್ರ ಪಾರ್ಟಿ)
1972 (ಎಸ್ಸಿ ಮೀಸಲು) ಪಿ.ಡಿ. ಬಂಗೇರ (ಕಾಂಗ್ರೆಸ್)
1978 (ಎಸ್ಸಿ ಮೀಸಲು) ಎ. ರಾಮಚಂದ್ರ (ಜನತಾ ಪಾರ್ಟಿ)
1983 (ಎಸ್ಸಿ ಮೀಸಲು) ಬಾಕಿಲ ಹುಕ್ರಪ್ಪ (ಬಿಜೆಪಿ)
1985 (ಎಸ್ಸಿ ಮೀಸಲು) ಕೆ. ಕುಶಲ (ಕಾಂಗ್ರೆಸ್)
1989 (ಎಸ್ಸಿ ಮೀಸಲು) ಕೆ. ಕುಶಲ (ಕಾಂಗ್ರೆಸ್)
1994 (ಎಸ್ಸಿ ಮೀಸಲು) ಎಸ್. ಅಂಗಾರ (ಬಿಜೆಪಿ)
1999 (ಎಸ್ಸಿ ಮೀಸಲು) ಎಸ್. ಅಂಗಾರ (ಬಿಜೆಪಿ)
2004 (ಎಸ್ಸಿ ಮೀಸಲು) ಎಸ್. ಅಂಗಾರ (ಬಿಜೆಪಿ)
2008 (ಎಸ್ಸಿ ಮೀಸಲು) ಎಸ್. ಅಂಗಾರ (ಬಿಜೆಪಿ)
2013 (ಎಸ್ಸಿ ಮೀಸಲು) ಎಸ್. ಅಂಗಾರ (ಬಿಜೆಪಿ)
2018 (ಎಸ್ಸಿ ಮೀಸಲು) ಎಸ್. ಅಂಗಾರ (ಬಿಜೆಪಿ)

(ಚಂದ್ರಾವತಿ ಬಡ್ಡಡ್ಕ ಹಿರಿಯ ಪತ್ರಕರ್ತೆ ಹಾಗು ಅಂಕಣಕಾರರು).