ಸುಳ್ಯ:ಈಗಿನ ಲೋಕಸಭೆಯಲ್ಲಿ ಸುಳ್ಯ ಕ್ಷೇತ್ರದ 3 ಮಂದಿ ಎಂಪಿಗಳಾಗಿದ್ದಾರೆ. ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ನಳಿನ್ಕುಮಾರ್ ಕಟೀಲ್, ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ.ವಿ.ಸದಾನಂದ ಗೌಡ ಹಾಗೂ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಎಂಪಿ ಹಾಗೂ ಕೇಂದ್ರ ಸಚುವೆ ಶೋಭಾ ಕರಂದ್ಲಾಜೆ ಅವರು ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟವರು. ಇದೀಗ ಮತ್ತೊಂದು ಲೋಕಸಭಾ ಚುನಾವಣೆ ಸನ್ನಿಹಿತವಾಗಿರುವ ಸಂದರ್ಭದಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ
ಅಭ್ಯರ್ಥಿಗಳು ಯಾರಾಗಬಹುದು, ಸುಳ್ಯ ಕ್ಷೇತ್ರಸವರಿಗೆ ಯಾರಿಗಾದರು ಅದೃಷ್ಠ ಒಲಿಯಬಹುದಾ, ಸುಳ್ಯದವರಾದ ಮುಖಂಡರಿಗೆ ಎಲ್ಲೆಲ್ಲಾ ಸ್ಪರ್ಧೆಗೆ ಅವಕಾಶ ಸಿಗಬಹುದು ಎಂಬ ಚರ್ಚೆಗಳು ಗರಿಗೆದರಿದೆ. ನಳಿನ್ಕುಮಾರ್ ಕಟೀಲ್, ಡಿ.ವಿ.ಸದಾನಂದ ಗೌಡ, ಶೋಭಾ ಕರಂದ್ಲಾಜೆ
ಈ ಮೂವರ ಪೈಕಿ ಯಾರಿಗೆ ಮತ್ತೆ ಅವಕಾಶ ದೊರೆಯಬಹುದು ಎಂಬ ಕುತೂಹಲ ಗರಿಗೆದರಿದೆ.
ನಳಿನ್ಕುಮಾರ್ ಕಟೀಲ್
ಬಿಜೆಪಿ, ಕಾಂಗ್ರೆಸ್ ಸೇರಿ ಯಾವುದೇ ಪಕ್ಷಗಳು ದಕ್ಷಿಣ ಕನ್ನಡ ಕ್ಷೇತ್ರದ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಬಿಜೆಪಿ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದರೂ ಕರ್ನಾಟಕದ ಅಭ್ಯರ್ಥಿಗಳ ಘೋಷಣೆ ಮಾಡಿಲ್ಲ.ನೆರೆಯ ಕಾಸರಗೋಡು ಕ್ಷೇತ್ರದ ಅಭ್ಯರ್ಥಿ ಘೋಷಣೆ ಮಾಡಿದರೂ ದಕ್ಷಿಣ ಕನ್ನಡದ ಅಭ್ಯರ್ಥಿ ಘೋಷಣೆಯಾಗಿಲ್ಲ. ಮೂರು ಬಾರಿಯ ಸಂಸದ, ಮಾಜಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರಿಗೆ ಮತ್ತೊಮ್ಮೆ ಅವಕಾಶ ನೀಡುತ್ತಾರಾ ಅಥವಾ ಅಚ್ಚರಿಯ ಹೊಸ ಮುಖವನ್ನು ಕಣಕ್ಕೆ ಇಳಿಸುತ್ತಾರಾ ಎಂಬ ಕುತೂಹಲ ಇದೆ. ನಳಿನ್ಕುಮಾರ್ ಕಟೀಲ್ ಅವರಿಗೆ ಮತ್ತೊಮ್ಮೆ ಅವಕಾಶ ದೊರೆಯಬಹುದು ಎಂದೇ ವಿಶ್ಲೇಷಿಸಲಾಗುತಿದೆ.
ಕಂಜಿಪಿಲಿ,ದಂಬೆಕೋಡಿ,ಮಡ್ತಿಲ,ಬುಡ್ಲೆಗುತ್ತು
ಬಿಜೆಪಿಯಲ್ಲಿ ಅಭ್ಯರ್ಥಿ ಬದಲಾದರೆ ಅಭ್ಯರ್ಥಿತನಕ್ಕೆ ಜಿಲ್ಲೆಯ ಪ್ರಮುಖರ ಹೆಸರು ಚಾಲ್ತಿಯಲ್ಲಿದೆ. ಅದರಲ್ಲಿಯೂ ಪ್ರಮುಖ ಸಮುದಾಯವಾದ ಗೌಡ ಸಮುದಾಯಕ್ಕೆ ಸೀಟ್ ನೀಡಬೇಕು ಎಂಬ ಬೇಡಿಕೆಯೂ ಇದೆ. ಈ ಹಿನ್ನಲೆಯಲ್ಲಿ ಸುಳ್ಯದ ಪ್ರಮುಖ ನಾಯಕರಿಗೆ ಅದೃಷ್ಠ ಒಲಿದು ಬರಬಹುದಾ ಎಂಬ ಲೆಕ್ಕಾಚಾರಗಳೂ, ಚರ್ಚೆಗಳು ನಡೆಯುತಿದೆ. ವಿಧಾನಸಭಾ ಚುನಾವಣೆಯಲ್ಲಿ ಮೀಸಲು ಕ್ಷೇತ್ರವಾದ ಕಾರಣ ಇಲ್ಲಿನ ಇತರ ಸಮುದಾಯದವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಇಲ್ಲ.ಆದುದರಿಂದ ಲೋಕಸಭಾ ಚುನಾವಣೆಯಲ್ಲಿ ಸುಳ್ಯದ ಪ್ರಮುಖ ನಾಯಕರಿಗೆ ಸ್ಪರ್ಧಿಸಲು ಅವಕಾಶ ನೀಡಬೇಕು ಎಂಬ ಬೇಡಿಕೆ ಹಿಂದಿನಿಂದಲೂ ಇದೆ.
ಡಿ.ವಿ.ಸದಾನಂದ ಗೌಡ
ಸುಳ್ಯ ಬಿಜೆಪಿಯಲ್ಲಿ ಸಕ್ರೀಯರಾಗಿರುವ ಮಾಜಿ ಮಂಡಲ ಸಮಿತಿ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ, ವೆಂಕಟ್ ದಂಬೆಕೋಡಿ ಅವರನ್ನು ಪರಿಗಣಿಸಬೇಕು ಎಂದು ಬಿಜೆಪಿಯ ಒಂದು ವಿಭಾಗದ ಪ್ರಮುಖರು ಬೇಡಿಕೆಯಿಟ್ಟಿದ್ದಾರೆ. ಈ ಬೇಡಿಕೆಯನ್ನು ವರಿಷ್ಠರ ಮುಂದೆಯೂ ಇರಿಸಲಾಗುವುದು. ಮತ್ತು ಪ್ರಯತ್ನ ಮುಂದುವರಿಸಲಾಗುವುದು. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ, ಜಿ.ಪಂ.ಮಾಜಿ ಸದಸ್ಯ ಹರೀಶ್ ಕಂಜಿಪಿಲಿ ಅವರ ಅನುಭವಕ್ಕೆ ಆದ್ಯತೆ ನೀಡಬೇಕು ಎಂದು ಸುಳ್ಯದ ಕೆಲವು ಬಿಜೆಪಿ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.
ಇನ್ನುಳಿದಂತೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ, ಕ್ಯಾಂಪ್ಕೋ ನಿರ್ದೇಶಕರಾದ ಕೃಷ್ಣಪ್ರಸಾದ್ ಮಡ್ತಿಲ ಅವರ ಹೆಸರು ಕೂಡ ಬಿಜೆಪಿ ಅಭ್ಯರ್ಥಿತನಕ್ಕೆ ಕೇಳಿ ಬರುತಿದೆ.
ಶೋಭಾ ಕರಂದ್ಲಾಜೆ
ಕಾಂಗ್ರೆಸ್ ಪಾಳಯದಲ್ಲಿಯೂ ಜಿಲ್ಲೆಯ ಹಲವು ಹಿರಿಯ, ಕಿರಿಯ ಮುಖಂಡರ ಹೆಸರುಗಳು ಕೇಳಿ ಬರುತಿದೆ. ಅಲ್ಲಿಯೂ ಸುಳ್ಯದವರ ಹೆಸರೂ ಚಾಲ್ತಿಯಲ್ಲಿದೆ. ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿ, ಮಂಗಳೂರು ಒಕ್ಕಲಿಗ ಯುವ ಸಂಘದ ಅಧ್ಯಕ್ಷ ಕಿರಣ್ ಬುಡ್ಲೆಗುತ್ತು ಅವರ ಹೆಸರು ಸಕ್ರೀಯವಾಗಿ ಕೇಳಿ ಬರುತಿದೆ. ಒಟ್ಟಿನಲ್ಲಿ ಈ ಬಾರಿಯ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿತನ ಕುತೂಹಲ ಮೂಡಿಸಿದೆ. ಸುಳ್ಯ ಕ್ಷೇತ್ರದವರಾದ ಮೂರು ಮಂದಿ ಎಂಪಿಗಳಿದ್ದ ಸ್ಥಾನದಲ್ಲಿ ಮತ್ತೆ ಎಷ್ಟು ಮಂದಿ ಬರಲಿದ್ದಾರೆ ಎಂಬುದು ಕಾದು ನೋಡಬೇಕಾಗಿದೆ.