ಸುಳ್ಯ:ಭಾರೀ ಕುತೂಹಲ ಕೆರಳಿಸಿದ್ದ ಸುಳ್ಯ ಬಿಜೆಪಿ ಮಂಡಲ ಸಮಿತಿಗೆ ಹೊಸ ಅಧ್ಯಕ್ಷರ ಘೋಷಣೆಯಾಗಿದ್ದು ಮಾಜಿ ಮಂಡಲ ಸಮಿತಿ ಅಧ್ಯಕ್ಷ, ಜಿಲ್ಲಾ ಉಪಾಧ್ಯಕ್ಷ ವೆಂಕಟ್ ವಳಲಂಬೆ ಅವರನ್ನು ನೂತನ ಅಧ್ಯಕ್ಷರಾಗಿ ಜಿಲ್ಲಾ ಸಮಿತಿ ಘೋಷಣೆ ಮಾಡಿದೆ. ಈ ಬಾರಿ ಸುಳ್ಯದ ಮಂಡಲ ಸಮಿತಿ ಅಧ್ಯಕ್ಷತೆ ಆಯ್ಕೆಯ ಬಗ್ಗೆ ಭಾರೀ ಕುತೂಹಲ ಕೆರಳಿಸಿತ್ತು. ಕಳೆದ ಕೆಲವು ದಿನಗಳಿಂದ ಯಾರು ಅಧ್ಯಕ್ಷರಾಗಲಿದ್ದಾರೆ ಎಂಬ ಬಗ್ಗೆ ಚರ್ಚೆಯೂ ಗರಿಗೆದರಿತ್ತು. ಆದುದರಿಂದಲೇ ಅಧ್ಯಕ್ಷ ಸ್ಥಾನಕ್ಕೆ ಹಲವು ಹೆಸರುಗಳು
ಚಾಲ್ತಿಯಲ್ಲಿತ್ತು. ಈ ಭಾರಿ ಹೊಸಮುಖ ಅಧ್ಯಕ್ಷರಾಗುವುದು ಖಚಿತ ಎಂದೇ ಬಿಂಬಿತವಾಗಿತ್ತು. ಪ್ರಮುಖವಾಗಿ ಎಪಿಎಂಸಿ ಮಾಜಿ ಅಧ್ಯಕ್ಷ ವಿನಯಕುಮಾರ್ ಮುಳುಗಾಡು, ಬಳ್ಪದ ಸುಬ್ರಹ್ಮಣ್ಯ ಕುಳ, ನ.ಪಂ.ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಮಂಡಲ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಸಂತೋಷ್ ಕುತ್ತಮೊಟ್ಟೆ, ಯತೀಶ್ ಆರ್ವಾರ ಮತ್ತಿತರ ಹೆಸರು ಸಕ್ರೀಯವಾಗಿ ಕೇಳಿ ಬಂದಿತ್ತು.ಇವರಲ್ಲಿ ಒಬ್ಬರು ಅಧ್ಯಕ್ಷರಾಗಬಹುದು ಎಂದು ಹೇಳಲಾಗಿತ್ತು. ಮಾಜಿ ಅಧ್ಯಕ್ಷರಾದ ವೆಂಕಟ್ ವಳಲಂಬೆ, ವೆಂಕಟ್ ದಂಬೆಕೋಡಿ ಅವರಲ್ಲಿ ಒಬ್ಬರಿಗೆ ಮತ್ತೊಮ್ಮೆ ಅಧ್ಯಕ್ಷರಾಗಿ ಅವಕಾಶ ನೀಡುವ ಸಾಧ್ಯತೆಯೂ ಇದೆ ಎಂದು ಕೆಲವು ಮೂಲಗಳು ಹೇಳಿದ್ದವು.

ರಾಕೇಶ್ ರೈ ಕೆಡೆಂಜಿ.
ಇವರಲ್ಲಿ ವಿನಯಕುಮಾರ್ ಮುಳುಗಾಡು ಅವರ ಹೆಸರು ಅಧ್ಯಕ್ಷತೆಗೆ ಅಂತಿಮಗೊಂಡಿದೆ, ವಿನಯಕುಮಾರ್ ಮುಳುಗಾಡು ಅವರಿಗೆ ಅಧ್ಯಕ್ಷತೆಗೆ ಅವಕಾಶ ನೀಡಬೇಕು ಎಂದು ಬಿಜೆಪಿ ಮಂಡಲ ಕೋರ್ ಕಮಿಟಿಯೂ ಶಿಫಾರಸ್ಸು ಮಾಡಿತ್ತು ಎಂದು ಹೇಳಲಾಗುತಿದೆ. ಕೋರ್ ಕಮಿಟಿಯು ಹಲವು ಸುತ್ತಿನ ಚರ್ಚೆ ನಡೆಸಿ ವಿನಯ ಮುಳುಗಾಡು ಹೆಸರು ಸೂಚಿಸಿತ್ತು ಎಂದು ಹೇಳಲಾಗುತಿದೆ.

ವಿನಯಕುಮಾರ್ ಮುಳುಗಾಡು.
ಆದರೆ ಇದೀಗ ಜಿಲ್ಲಾ ಸಮಿತಿಯು ಮಾಜಿ ಅಧ್ಯಕ್ಷ, ಜಿಲ್ಲಾ ಉಪಾಧ್ಯಕ್ಷ ವೆಂಕಟ್ ವಳಲಂಬೆಯವರಿಗೆ ಪಕ್ಷ ಮತ್ತೊಮ್ಮೆ ಅವಕಾಶ ನೀಡಿದೆ. ಮಂಡಲ ಸಮಿತಿ ಅಧ್ಯಕ್ಷರಾಗಬಹುದು ಎಂದು ನಿರೀಕ್ಷಿಸಲ್ಪಟ್ಟಿದ್ದ ವಿನಯ ಮುಳುಗಾಡು ಅವರನ್ನು ಜಿಲ್ಲಾ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಹೆಸರಿಸಲ್ಪಟ್ಟಿದ್ದ ಬಿಜೆಪಿ ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಅವರು ಜಿಲ್ಲಾ ಉಪಾಧ್ಯಕ್ಷರಾಗಿ , ಯತೀಶ್ ಆರ್ವಾರ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
ಮುಂದೆ ಲೋಕಸಭಾ ಚುನಾವಣೆ ಬರುವ ಹಿನ್ನಲೆಯಲ್ಲಿ ಹಿರಿಯರಿಗೆ ಮತ್ತೊಮ್ಮೆ ಅವಕಾಶ ನೀಡಲಾಗಿದೆ ಎಂಬುದು ಪಕ್ಷದ ಕೆಲವು ಮುಖಂಡರ ಅಭಿಪ್ರಾಯ
ಅಂಗಾರರಿಗೆ ಆಪ್ತರು:
ಬಿಜೆಪಿ ಹಾಗೂ ಸಂಘ ಪರಿವಾರ ಸಂಘಟನೆಗಳಲ್ಲಿ ಸಕ್ರೀಯರಾಗಿರುವ
ವೆಂಕಟ್ ವಳಲಂಬೆಯವರು ಮಾಜಿ ಸಚಿವ ಎಸ್.ಅಂಗಾರ ಅವರ ಆಪ್ತ ವಲಯದಲ್ಲಿ ಗುರುತಿಸಿ ಕೊಂಡವರು. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಅಂಗಾರರಿಗೆ ಸುಳ್ಯ ಕ್ಷೇತ್ರದ ಬಿಜೆಪಿ ಟಿಕೆಟ್ ತಪ್ಪಿದಾಗ ಇದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ವೆಂಕಟ್ ವಳಲಂಬೆಯವರು ಪಕ್ಷದ ಹುದ್ದೆಗಳಿಗೆ ರಾಜಿನಾಮೆ ನೀಡುವುದಾಗಿ ಘೋಷಿಸಿದ್ದರು.
ಬಳಿಕ ಬಿಜೆಪಿ ಮುಖಂಡರು ಇವರನ್ನು ಭೇಟಿಯಾಗಿ ಚರ್ಚಿಸಿ ಸಮಾಧಾನಪಡಿಸಿದ್ದರು.









