ವಾಸಾ: ಪ್ರಧಾನಿ ನರೇಂದ್ರ ಮೋದಿ ಅವರು ಪೋಲೆಂಡ್ ಪ್ರವಾಸ ಕೈಗೊಂಡಿದ್ದಾರೆ. ರಾಜಧಾನಿ ವಾಸಾಗೆ ಇಂದು ಬಂದಿಳಿದ ಮೋದಿ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ಭಾರತದ ಪ್ರಧಾನಿಯೊಬ್ಬರು 45 ವರ್ಷಗಳ ನಂತರ ಕೈಗೊಂಡಿರುವ ಮೊದಲ
ಪೋಲೆಂಡ್ ಭೇಟಿ ಇದಾಗಿದೆ. ‘ಈ ಭೇಟಿಯು ಭಾರತ ಹಾಗೂ ಪೋಲೆಂಡ್ ನಡುವಣ ಬಾಂಧವ್ಯಕ್ಕೆ ವೇಗವನ್ನು ನೀಡಲಿದೆ. ಉಭಯ ರಾಷ್ಟ್ರಗಳ ಜನರಿಗೆ ಪ್ರಯೋಜನವಾಗಲಿದೆ’ ಎಂದು ಪೋಲೆಂಡ್ಗೆ ಬಂದಿಳಿದ ಬಳಿಕ ಪ್ರಧಾನಿ ಮೋದಿ ಎಕ್ಸ್ನಲ್ಲಿ ತಿಳಿಸಿದ್ದಾರೆ. ಪ್ರಧಾನಿ ಮೋದಿ ಅವರಿಗೆ ಅನಿವಾಸಿ ಭಾರತೀಯರು ಭವ್ಯ ಸ್ವಾಗತವನ್ನು ಕೋರಿದ್ದಾರೆ.
ಮೂರು ದಿನಗಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಇದೇ ಮೊದಲ ಬಾರಿಗೆ ಪೋಲೆಂಡ್ ಹಾಗೂ ಉಕ್ರೇನ್ಗೆ ಭೇಟಿ ನೀಡುತ್ತಿದ್ದಾರೆ. ಪೋಲೆಂಡ್ ಬಳಿಕ ಉಕ್ರೇನ್ನ ರಾಜಧಾನಿ ಕೀವ್ಗೆ ಮೋದಿ ತೆರಳಲಿದ್ದಾರೆ. ನರೇಂದ್ರ ಮೋದಿ ಅವರು 1991ರಲ್ಲಿ ಉಕ್ರೇನ್ ಸ್ವತಂತ್ರವಾದ ಬಳಿಕ ಆ ದೇಶಕ್ಕೆ ಭೇಟಿ ನೀಡುತ್ತಿರುವ ಭಾರತದ ಮೊದಲ ಪ್ರಧಾನಿ ಎನಿಸಲಿದ್ದಾರೆ.