ತ್ರಿಶ್ಶೂರ್: ಕೇರಳದ ಗುರುವಾಯೂರಿನಲ್ಲಿರುವ ಪ್ರಸಿದ್ಧ ಶ್ರೀಕೃಷ್ಣ ದೇಗುಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಬೆಳಗ್ಗೆ ಪ್ರಾರ್ಥನೆ ಸಲ್ಲಿಸಿದರು. ದೇವಸ್ಥಾನಕ್ಕೆ ಆಗಮಿಸಿದ ಮೋದಿ ಸಾಂಪ್ರದಾಯಿಕ ಮಲಯಾಳಿ ಶೈಲಿಯಲ್ಲಿ ಬಿಳಿ ಮುಂಡು (ಧೋತಿ), ಶರ್ಟ್ ಮತ್ತು ಶಾಲು ಧರಿಸಿದ್ದರು. ಗುರುವಾಯೂರು ದೇವಾಲಯದಲ್ಲಿ ನಡೆದ ಬಿಜೆಪಿ ನಾಯಕ , ನಟ ಸುರೇಶ್ ಗೋಪಿ ಅವರ ಮಗಳು ಭಾಗ್ಯಾ ಸುರೇಶ್ ಅವರ ಮದುವೆಯಲ್ಲಿ ಮೋದಿ ಭಾಗಿಯಾಗಿ ನವ ದಂಪತಿಗಳನ್ನು
ಹರಸಿದರು. ಇಂದು ಮದುವೆಯಾದ ಇತರ ದಂಪತಿಗಳನ್ನೂ ಮೋದಿಯವರು ಹರಸಿದರು. ಮಮ್ಮುಟ್ಟಿ, ಮೋಹನ್ಲಾಲ್, ಜಯರಾಂ, ದಿಲೀಪ್, ಖುಷ್ಬೂ ಸೇರಿದಂತೆ ಚಿತ್ರರಂಗದ ಸೂಪರ್ಸ್ಟಾರ್ಗಳು ಸಹ ಅಲ್ಲಿ ಹಾಜರಿದ್ದರು. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ದೇವಾಲಯಕ್ಕೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು.

ಬೆಳಗ್ಗೆ 7.35ರ ಸುಮಾರಿಗೆ ಹೆಲಿಕಾಪ್ಟರ್ ಮೂಲಕ ಗುರುವಾಯೂರಿಗೆ ಆಗಮಿಸಿದ ಪ್ರಧಾನಿ ಮೋದಿ ಶ್ರೀಕೃಷ್ಣ ಕಾಲೇಜು ಮೈದಾನದಲ್ಲಿ ಬಂದಿಳಿದಿದ್ದು, ನೂರಾರು ಬಿಜೆಪಿ ಬೆಂಬಲಿಗರು ಮತ್ತು ಕಾರ್ಯಕರ್ತರು ಅವರನ್ನು ಸ್ವಾಗತಿಸಲು ಜಮಾಯಿಸಿದ್ದರು.
ಹೆಲಿಪ್ಯಾಡ್ನಿಂದ ಶ್ರೀವಲ್ಸಮ್ ಗೆಸ್ಟ್ ಹೌಸ್ಗೆ ತೆರಳಿದ ಪ್ರಧಾನಿ ಮೋದಿ ಅಲ್ಲಿ ಪ್ರಾರ್ಥನೆ ಸಲ್ಲಿಸಲು ದೇವಸ್ಥಾನಕ್ಕೆ ತೆರಳುವ ಮುನ್ನ ಕೇರಳದ ಸಾಂಪ್ರದಾಯಿಕ ಉಡುಗೆಯನ್ನು ಬದಲಾಯಿಸಿಕೊಂಡರು.
ನಂತರ ಅವರು ತ್ರಿಶ್ಶೂರ್ ಜಿಲ್ಲೆಯ ತ್ರಿಪ್ರಯಾರ್ ಶ್ರೀರಾಮ ಸ್ವಾಮಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಕೊಚ್ಚಿಗೆ ಹಿಂದಿರುಗುವ ಮೊದಲು ಅಲ್ಲಿ ಕೇಂದ್ರ ಸರ್ಕಾರ ಮತ್ತು ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಕೇರಳಕ್ಕೆ ಎರಡು ದಿನಗಳ ಭೇಟಿಗಾಗಿ ಪ್ರಧಾನಿ ಮೋದಿ ಮಂಗಳವಾರ ಸಂಜೆ ಕೇರಳಕ್ಕೆ ಆಗಮಿಸಿದ್ದರು.









