ಉಡುಪಿ: ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಹಮ್ಮಿಕೊಂಡಿರುವ ಲಕ್ಷಕಂಠ ಗೀತಾ ಪಠಣ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತ ಭಾಗ್ಯ ವಿಧಾತ ಬಿರುದು ನೀಡಿ ಸನ್ಮಾನಿಸಲಾಯಿತು.ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು, ಬಿರುದು ನೀಡಿ ಸನ್ಮಾನಿಸಿದರು.
ಲಕ್ಷ ಕಂಠ ಗೀತಾ ಕಾರ್ಯಕ್ರಮದ ಅಂಗವಾಗಿ ಭಗವದ್ಗೀತೆಯ
18ನೇ ಅಧ್ಯಾಯದ ಕೊನೆಯ ಕೆಲವು ಶ್ಲೋಕಗಳನ್ನು ಸಾಮೂಹಿಕವಾಗಿ ಪಠಣ ಮಾಡಲಾಯಿತು. ನರೇಂದ್ರ ಮೋದಿ ಅವರು, ’ಎಲ್ಲರಿಗೂ ನಮಸ್ಕಾರ..‘ ಎಂದು ಕನ್ನಡದಲ್ಲಿ ಮಾತು ಆರಂಭಿಸಿದ್ದಾರೆ. ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಹಮ್ಮಿಕೊಂಡ ಲಕ್ಷಕಂಠ ಗೀತಾ ಪಠಣ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ನಾಗರಿಕರಿಗೆ ‘ನವ ಸಂಕಲ್ಪ’ ಮಾಡುವಂತೆ ಮನವಿ

ಮಾಡಿದರು.ಎಲ್ಲರೂ ಈ ಒಂಬತ್ತು ಸಂಕಲ್ಪ ಮಾಡಿ, ವರ್ತಮಾನ ಮತ್ತು ಭವಿಷ್ಯಕ್ಕೆ ಇವು ಅಗತ್ಯ ಎಂದು ಒತ್ತಿ ಹೇಳಿದರು.ಜಲಸಂರಕ್ಷಣೆ, ಮರ ಬೆಳೆಸುವುದು, ಪ್ರತಿಯೊಬ್ಬರೂ ಕನಿಷ್ಠಪಕ್ಷ ಒಬ್ಬ ಬಡವರ ಜೀವನ ಸುಧಾರಿಸುವುದು,ಸ್ವದೇಶಿ ಅಳವಡಿಸಿಕೊಳ್ಳುವುದು, ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳುವುದು, ಆರೋಗ್ಯಪೂರ್ಣ ಜೀವನ ಶೈಲಿ ಅಳವಡಿಸಿಕೊಳ್ಳುವುದು, ಯೋಗ ಅಳವಡಿಸಿಕೊಳ್ಳುವುದು, ಹಸ್ತಪ್ರತಿ ಸಂರಕ್ಷಣೆಗೆ ಸಹಯೋಗ ನೀಡುವುದು, ಕನಿಷ್ಠ ಪಕ್ಷ ದೇಶದ 25 ಪುಣ್ಯ ಕ್ಷೇತ್ರಗಳ ದರ್ಶನ ಮಾಡುತ್ತೇನೆ ಎಂಬ ಸಂಕಲ್ಪ ಹೀಗೆ ಒಂಭತ್ತು ಸಂಕಲ್ಪ ಮಾಡಲು ಅವರು ಕರೆ ನೀಡಿದರು.












