ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಸರಕಾರದ ಆದೇಶದಂತೆ ಮತ್ತು ರಾಜ್ಯ ಧಾರ್ಮಿಕ ದತ್ತಿ ಆಯುಕ್ತರ ಸುತ್ತೋಲೆ ಪ್ರಕಾರ ಆ.15ರಿಂದ ಸಂಪೂರ್ಣವಾಗಿ ಪ್ಲಾಸ್ಟಿಕ್ ನಿಷೇಧ ಮಾಡಲಾಗುವುದು.ಅಲ್ಲದೆ ಈ ಮೂಲಕ ನಮ್ಮ ನಡೆ ಪ್ಲಾಸ್ಟಿಕ್ ಮುಕ್ತದೆಡೆ ಅಭಿಯಾನಕ್ಕೆ ಪುಣ್ಯಕ್ಷೇತ್ರ ದಲ್ಲಿ ಚಾಲನೆ ನೀಡಲಾಗುವುದು. ಆರೋಗ್ಯಕ್ಕೆ ಮಾರಕವಾದ ಪ್ಲಾಸ್ಟಿಕ್ ಬಳಕೆ ಮಾಡದೆ ನಿರ್ಬಂಧಿಸುವ ಈ ಕಾರ್ಯಕ್ಕೆ ಸರ್ವ ಭಕ್ತರು ಮತ್ತು
ಸಾರ್ವಜನಿಕರು ಸರ್ವ ರೀತಿಯ ಸಹಕಾರ ನೀಡಿ ಸಂಪೂರ್ಣವಾಗಿ ಪ್ಲಾಸ್ಟಿಕ್ ಬಳಕೆ ಹತ್ತಿಕ್ಕಲು ದೇವಳದೊಂದಿಗೆ ಕೈ ಜೋಡಿಸಬೇಕೆಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್. ಎಸ್. ಇಂಜಾಡಿ ತಿಳಿಸಿದ್ದಾರೆ.
ಕರ್ನಾಟಕ ಸರಕಾರ ಅಧಿಸೂಚನೆಯಂತೆ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಏಕಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳ ಉತ್ಪಾದನೆ ಸಂಗ್ರಹಣಿ, ವಿತರಣೆ, ಮಾರಾಟ ಮತ್ತು ಬಳಕೆಯನ್ನು ಕಡ್ಡಯವಾಗಿ ಆ.15ರಿಂದ ನಿಷೇಧಿಸಲಾಗುತ್ತದೆ
ದೇವಸ್ಥಾನಗಳಲ್ಲಿ ನೀರಿನ ಬಾಟಲ್ ಸೇರಿದಂತೆ ಎಲ್ಲಾ ರೀತಿಯ ಪ್ಲಾಸ್ಟಿಕ್ ಸಾಮಾಗ್ರಿಗಳ ಬಳಕೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ದೇವಳದ ಪರಿಸರದ ಅಂಗಡಿಗಳಲ್ಲಿ , ವಾಣಿಜ್ಯ
ಸಂಕೀರ್ಣಗಳಲ್ಲಿ ಏಕಬಳಕೆಯ ಪ್ಲಾಸ್ಟಿಕ್ಗಳ ಉತ್ಪಾದನೆ, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಬಳಕೆಯನ್ನು
ಕಡ್ಡಾಯವಾಗಿ ನಿರ್ಬಂಧಿಸಲಾಗುತ್ತದೆ. ಬಳಕೆ ಕಂಡು ಬಂದಲ್ಲಿ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ
ಕಾಯ್ದೆಗಳ ಪ್ರಕಾರ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.ಶ್ರೀ ದೇವಳದ ಅಧೀನದ ಎಲ್ಲಾ ಅಂಗಡಿ ಕಟ್ಟಡದ ಬಾಡಿಗೆದಾರರು, ವ್ಯಾಪಾರಸ್ಥರು ದೇವಳದ ಎಲ್ಲಾ ವ್ಯಾಪಾರದ ಅಂಗಡಿ ಕಟ್ಟಡಗಳಲ್ಲಿ ಹಾಗೂ ಆವರಣಗಳಲ್ಲಿ
ಪ್ಲಾಸ್ಟಿಕ್ ಬಳಕೆಯನ್ನು ಹಾಗೂ ಪ್ಲಾಸ್ಟಿಕ್ ಉತ್ಪನ್ನಗಳ ಮಾರಾಟವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಉಲ್ಲಂಘಿಸಿದಲ್ಲಿ ದಂಡನೆಯನ್ನು ವಿಧಿಸಲಾಗುವುದು ಹಾಗೂ ಅಂಗಡಿಗಳನ್ನು
ತೆರವುಗೊಳಿಸಲು ಸೂಕ್ತ ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.





