ಸುಳ್ಯ: ಸುಳ್ಯದಲ್ಲಿ ಶನಿವಾರ ವೈವಿಧ್ಯಮಯ ಛಾಯಾಚಿತ್ರಗಳ ಅದ್ಭುತ ಲೋಕ ತೆರೆದುಕೊಂಡಿತು. ಸುಳ್ಯ ವಲಯದ ಫೋಟೋಗ್ರಾಫರ್ಗಳು ಕ್ಲಿಕ್ಕಿಸಿದ ನೂರಾರು ಸುಂದರ ಮತ್ತು ವರ್ಣಮಯ ಚಿತ್ರಗಳು ನೋಡುಗರ ಮನಸೂರೆಗೊಂಡಿತು. ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಸುಳ್ಯ ವಲಯದ ನೇತೃತ್ವದಲ್ಲಿ

ರೋಟರಿ ಕ್ಲಬ್ ಸುಳ್ಯ, ರೋಟರಿ ಕ್ಲಬ್ ಸುಳ್ಯ ಸಿಟಿ, ಹಾಗೂ ಇನ್ನರ್ವೀಲ್ ಸಹಯೋಗದಲ್ಲಿ
ವಿಶ್ವ ಫೋಟೋಗ್ರಫಿ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ ಛಾಯಾಚಿತ್ರ ಪ್ರದರ್ಶನ ‘ಫೋಟೋ ಗ್ಯಾಲರಿ ಡಿಸ್ಪ್ಲೇ’ ವರ್ಣ ವೈವಿಧ್ಯ ಛಾಯಾಚಿತ್ರಗಳ ಅದ್ಭುತ ಲೋಕವನ್ನು ತೆರೆದಿಟ್ಟಿತು.
ಸುಳ್ಯ ವಲಯ ಪೋಟೋಗ್ರಾಫರ್ಸ್ ಅಸೋಸಿಯೇಷನ್ನ ಸದಸ್ಯರಾದ ಕ್ರೀಯಾಶೀಲ ಫೋಟೋಗ್ರಾಫರ್ಸ್ ತೆಗೆದ ಸುಮಾರು 600ಕ್ಕೂ ಅಧಿಕ

ಚಿತ್ರಗಳನ್ನು ಪ್ರದರ್ಶನಕ್ಕಿಡಲಾಗಿದೆ. ಪರಿಸರ, ವನ್ಯಜೀವಿ, ಜಾತ್ರೆ, ರಥೋತ್ಸವ, ದೈವಗಳ, ವ್ಯಕ್ತಿಗಳ,ಸಮಾರಂಭಗಳು, ಕೃಷಿ ಚಟುವಟಿಕೆಗಳು ಸೇರಿದಂತೆ ವಿವಿಧ ಕ್ಷೇತ್ರಗಳ ವೈವಿಧ್ಯಮಯ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗಿದೆ. 25ಕ್ಕೂ ಹೆಚ್ಚು ಮಂದಿ ಪೋಟೋಗ್ರಾಫರ್ಗಳು ತೆಗೆದ ವೈವಿಧ್ಯಮಯ ಛಾಯಾಚಿತ್ರಗಳು ಕಣ್ಣಿಗೆ ಆನಂದವನ್ನು ನೀಡಿದೆ. ಛಾಯಾಚಿತ್ರಗಾರರು ಮದುವೆ, ಸಮಾರಂಭಗಳ ಚಿತ್ರ ತೆಗೆಯುವುದಕ್ಕಿಂತ ಭಿನ್ನವಾಗಿ ಇತರ ಕ್ರಿಯಾಶೀಲ ಛಾಯಾಚಿತ್ರಗಳನ್ನು ತೆಗೆಯಲು

ಪ್ರೇರೇಪಣೆ ನೀಡಲು ಮತ್ತು ಕ್ರಿಯಾಶೀಲ ಫೋಟೋಗ್ರಾಫರ್ಗಳಿಗೆ
ಪ್ರೋತ್ಸಾಹ ನೀಡುವ ಸಲುವಾಗಿ ಅವರು ಅತ್ಯುತ್ತಮ ಫೋಟೋಗಳನ್ನು ಪ್ರದರ್ಶನ ಮಾಡಲಾಗಿದೆ ಎಂದು ಎಸ್ಕೆಪಿಎ ಸುಳ್ಯ ವಲಯದ ಅಧ್ಯಕ್ಷ ಶಶಿ ಗೌಡ ತಿಳಿಸಿದ್ದಾರೆ.

ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಡಾ.ರಾಮ್ ಮೋಹನ್ ಉದ್ಘಾಟಿಸಿದರು. ಎಸ್ಕೆಪಿಎ ಸುಳ್ಯ ವಲಯದ ಅಧ್ಯಕ್ಷ ಶಶಿ ಗೌಡ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಫೋಟೋಗ್ರಾಫರ್ ಕೆ.ಎಸ್.ಗೋಪಾಲಕೃಷ್ಣ, ರೋಟರಿ ಸುಳ್ಯ ಸಿಟಿ ಅಧ್ಯಕ್ಷ ಹೇಮಂತ್ ಕಾಮತ್, ಇನ್ನರ್ ವೀಲ್ ಅಧ್ಯಕ್ಷೆ ಸವಿತಾ ಸಿ.ಕೆ, ರೋಟರಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ಪ್ರಭಾಕರನ್ ನಾಯರ್, ಪೋಟೋಗ್ರಾಫರ್ ಹರಿ ರಾವ್ ಮತ್ತಿತರರು ಉಪಸ್ಥಿತರಿದ್ದರು.













