ಪೆರುವಾಜೆ: ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವದ ಪ್ರಯುಕ್ತ ಜ.16 ರಂದು ಬೆಳ್ಳಾರೆಯಿಂದ ಪೆರುವಾಜೆ ಶ್ರೀ ಕ್ಷೇತ್ರದ ತನಕ ನಡೆಯಲಿರುವ ಹಸಿರು ಹೊರೆಕಾಣಿಕೆ ಮೆರವಣಿಗೆಯು ವೈಭವದಿಂದ ನಡೆಯಲಿದ್ದು ಕ್ಷೇತ್ರದ ಭಕ್ತವೃಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ ವಿನಂತಿಸಿದ್ದಾರೆ. ಹಸಿರು ಹೊರೆಕಾಣಿಕೆ
ಮೆರವಣಿಗೆಯ ಸಿದ್ಧತೆ ಕುರಿತಂತೆ ರವಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಜ.16 ರಂದು ಮಧ್ಯಾಹ್ನ 3 ಗಂಟೆಗೆ ಬೆಳ್ಳಾರೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದ ಮುಂಭಾಗದಿಂದ ಹೊರೆಕಾಣಿಕೆ ಮೆರವಣಿಗೆ ಆರಂಭಗೊಳ್ಳಲಿದೆ. ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಚಾಲನೆ ನೀಡಲಿದ್ದಾರೆ. ಮೆರವಣಿಗೆಯು ಮುಖ್ಯ ರಸ್ತೆ ಮೂಲಕ ಸಾಗಿ ಮಾಸ್ತಿಕಟ್ಟೆಯಿಂದ ಬಂದು ಶ್ರೀ ಕ್ಷೇತ್ರಕ್ಕೆ ಹಸುರು ಹೊರೆಕಾಣಿಕೆ ಸಮರ್ಪಣೆಯಾಗಲಿದೆ. ವಾಹನ ಜಾಥಾ ಸಮಿತಿಯ ರಜನೀಶ್ ಸವಣೂರು ಹೇಳಿದರು.ಪ್ರಚಾರ ವಾಹನ, ಪೂರ್ಣ ಕುಂಭ, ಅಲಂಕಾರಿಕ ಬಣ್ಣದ ಕೊಡೆಗಳು, ಚೆಂಡೆ, ಅಯೋಧ್ಯೆಯ ರಾಮಮಂದಿರವನ್ನು ಸಾರುವ ಜಾಥಾ ವಾಹನ, ಕುಣಿತ ಭಜನೆ, ಧಾರ್ಮಿಕತೆಯನ್ನು ಸಾರುವ ಮಕ್ಕಳ ವಿವಿಧ ವೇಷಗಳು, ನವದುರ್ಗೆಯರು, ಗೊಂಬೆ ವೇಷ, ಪಿಲಿವೇಷ, ಹಸುರು ಹೊರೆಕಾಣಿಕೆ ಹೊತ್ತ ವಾಹನಗಳು, ಭಕ್ತರು ಪಾಲ್ಗೊಳ್ಳಲಿದ್ದಾರೆ. ಭಾವೈಕ್ಯ ಮಹಿಳಾ ಮಂಡಲದ ಅಧ್ಯಕ್ಷೆ ಅನುಸೂಯ ಹಾಗೂ ವಿವಿಧ ಸಂಘಗಳ ಪದಾಧಿಕಾರಿಗಳು ಸಲಹೆ ಸೂಚನೆ ನೀಡಿದರು.
ಸಭೆಯಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯ ನಾರಾಯಣ ಕೊಂಡೆಪ್ಪಾಡಿ, ವಿವಿಧ ಸಮಿತಿಯ ಪದಾಧಿಕಾರಿಗಳು, ಕಚೇರಿ ವ್ಯವಸ್ಥಾಪಕ ವಸಂತ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ಹರ್ಷಿತ್ ಪೆರುವಾಜೆ ವಂದಿಸಿದರು.









