ಪೆರುವಾಜೆ: ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರವಾದ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಶತಮಾನದ ಬಳಿಕ ನಡೆದ ಭಕ್ತಿ ಸಂಭ್ರಮದ ಬ್ರಹ್ಮ ರಥೋತ್ಸವ ಇತಿಹಾಸ ಸೃಷ್ಠಿಸಿತು. ಶುಕ್ರವಾರ ರಾತ್ರಿ ನಡೆದ ಭಕ್ತಿ ಸಂಭ್ರಮದ ಬ್ರಹ್ಮ ರಥೋತ್ಸವವನ್ನು ಭಕ್ತ ಸಮೂಹ ಕಣ್ತುಂಬಿಕೊಂಡರು. ಜ.15ರಂದು ಆರಂಭಗೊಂಡ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಈ ಬಾರಿ ಬ್ರಹ್ಮರಥೋತ್ಸವ
ವಿಶೇಷತೆಯಾಗಿತ್ತು.ಜ.16 ರಂದು ದೇವಳಕ್ಕೆ ನೂತನ ಬ್ರಹ್ಮರಥ ಸಮರ್ಪಿಸಲಾಗಿತ್ತು. ಶುಕ್ರವಾರ ರಾತ್ರಿ ಶ್ರೀ ದೇವರ ಬಲಿ ಹೊರಟು ಉತ್ಸವ, ವಸಂತಕಟ್ಟೆ ಪೂಜೆ ನಡೆಯಿತು. ವ್ಯಾಘ್ರಚಾಮುಂಡಿ ದೈವ (ಪಿಲಿಭೂತ)ದ ಭಂಡಾರ ಬಂದ ಬಳಿಕ ಕ್ಷೇತ್ರದ ತಂತ್ರಿಗಳಾದ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದು ಜಲದುರ್ಗಾ ದೇವಿ ಬ್ರಹ್ಮರಥಾರೂಢರಾದರು.

ಇದಕ್ಕೂ ಮುನ್ನ ವ್ಯಾಘ್ರ ಚಾಮುಂಡಿ(ಪಿಲಿ ಭೂತ) ದೈವ ಭಕ್ತರನ್ನು ಹರಸಿತು. ವ್ಯಾಘ್ರ ಚಾಮುಂಡಿ ಹಾಗೂ ಜಲದುರ್ಗಾ ದೇವಿಯು ಮುಖಾಮುಖಿಯ ಅಪೂರ್ವ ಕ್ಷಣಕ್ಕೂ ಭಕ್ತರು ಸಾಕ್ಷಿಯಾದರು. ಬಳಿಕ ದೇವರು ಬ್ರಹ್ಮರಥ ಏರಿದರು. ಬ್ರಹ್ಮ ರಥದಲ್ಲಿ ವಿಶೇಷ ಪೂಜೆ, ಧಾರ್ಮಿಕ ವಿಧಿ ವಿಧಾನಗಳು ನಡೆದು ಶ್ರೀ ದೇವರ ವೈಭವದ ಬ್ರಹ್ಮರಥೋತ್ಸವ ನೆರವೇರಿತು. ದೇವಸ್ಥಾನದ ಮುಂಭಾಗದ ರಥ ಬೀದಿಯಲ್ಲಿ ಸಹಸ್ರಾರು ಮಂದಿಯ ಕಂಠದಿಂದ ಹೊರ ಹೊಮ್ಮಿದ ಮುಗಿಲು ಮುಟ್ಟಿದ ಹರ್ಷೋದ್ಘಾರ ಮತ್ತು ಭಕ್ತಿ ಸಂಭ್ರಮದ ಜಯ ಘೋಷದ ಮಧ್ಯೆ ಬ್ರಹ್ಮರಥ ಸಾಗಿ ಬಂದಿತು. ವ್ಯಾಘ್ರ ಚಾಮುಂಡಿ ದೈವ ರಥದ ಜೊತೆ ಆಗಮಿಸಿ ಅಭಯ ನೀಡಿತು. ರಥ ಎಳೆಯಲು 200 ಮಂದಿಗೆ ಪಾಸ್ ನೀಡಲಾಗಿತ್ತು. ಪಾಸ್ ಪಡೆದವರು ಸಾಂಪ್ರದಾಯಿಕ ವಸ್ತ್ರ ಧರಿಸಿ ರಥ ಎಳೆದರು. ರಥಬೀದಿಯಲ್ಲಿ ಸುಮಾರು 250 ಮೀಟರ್ ಸಾಗಿ ಬಂದ ಬ್ರಹ್ಮ ರಥ ಬಳಿಕ ದೇವಸ್ಥಾನಕ್ಕೆ ಹಿಂತಿರುಗಿತು. ಆ ಮೂಲಕ ಜಲದುರ್ಗಾ ದೇವಿಯ ಸನ್ನಿಧಿಯಲ್ಲಿ ಶತಮಾನಗಳ ಬಳಿಕ ನಡೆದ ಮೊದಲ ಬ್ರಹ್ಮ ರಥೋತ್ಸವ ಸಂಪನ್ನಗೊಂಡಿತು.

ರಥೋತ್ಸವದ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರನ್ನು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ನಡೆದ ಪೆರುವಾಜೆ ಬೆಡಿ ಪ್ರದರ್ಶನ ಆಕಾಶದಲ್ಲಿ ವರ್ಣ ಚಿತ್ತಾರ ಮೂಡಿಸಿತು. ರಥೋತ್ಸವಕ್ಕೆ ಮುನ್ನ ರಥಬೀದಿಯಲ್ಲಿ ನಡೆದ 10 ತಂಡಗಳ ಕುಣಿತ ಭಜನೆ ಚಿತ್ತಾಕರ್ಷಕವಾಗಿತ್ತು.
ಶ್ರೀ ಕ್ಷೇತ್ರ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕಿ ಭಾಗೀರಥಿ ಮುರುಳ್ಯ, ಅರುಣ್ ಕುಮಾರ್ ಪುತ್ತಿಲ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಪಿ.ಪದ್ಮನಾಭ ಶೆಟ್ಟಿ, ಪವಿತ್ರಪಾಣಿ ಸುಬ್ರಹ್ಮಣ್ಯ ನಿಡ್ವಣ್ಣಾಯ ಕುಮಾರಮಂಗಲ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್, ಪಿ. ವೆಂಕಟಕೃಷ್ಣ ರಾವ್, ಪಿ. ಜಗನ್ನಾಥ ರೈ, ನಾರಾಯಣ ಕೆ., ಯಶೋದ ಎ. ಎಸ್., ಜಯಪ್ರಕಾಶ್ ರೈ ಬಿ., ದಾಮೋದರ ನಾಯ್ಕ, ಭಾಗ್ಯಲಕ್ಷ್ಮೀ, ದೇವಸ್ಥಾನದ ಕಛೇರಿ ವ್ಯವಸ್ಥಾಪಕ ವಸಂತ ಪೆರುವಾಜೆ ಮತ್ತು ಸಿಬ್ಬಂದಿ ವರ್ಗ ಹಾಗೂ ಊರ ಪರವೂರ ಅನೇಕ ಭಕ್ತಾದಿಗಳು ಉಪಸ್ಥಿತರಿದ್ದರು.









