ಪೆರುವಾಜೆ: ಪೆರುವಾಜೆಯ ಡಾ.ಕೆ ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ, ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ಸುಳ್ಯದ ಯುವಜನ ಸಂಯುಕ್ತ ಮಂಡಳಿ ಇವುಗಳ ಸಹಯೋಗದಲ್ಲಿ ಪಶ್ಚಿಮ ಘಟ್ಟಗಳ ಮಹತ್ವ ಮತ್ತು ಅಗತ್ಯ ಕುರಿತಾದ ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ ನಡೆಯಿತು. ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತರಾದ ಲಕ್ಷ್ಮೀನಾರಾಯಣ ಕಜೆಗದ್ದೆ ಕಾರ್ಯಕ್ರಮಕ್ಕೆ
ಚಾಲನೆ ನೀಡಿದರು. ವಿದ್ಯಾರ್ಥಿಗಳು ಪರಿಸರಾಸಕ್ತಿಯನ್ನು ಬೆಳೆಸಿಕೊಳ್ಳುವುದರ ಜೊತೆಗೆ ಸುತ್ತಮುತ್ತಲಿನ ಸಮುದಾಯಗಳಲ್ಲಿ ಪರಿಸರ ಜಾಗೃತಿಯನ್ನು ಮೂಡಿಸಬೇಕು ಎಂದು ಆಶಿಸಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ನಾಡಿನ ಪ್ರಖ್ಯಾತ ಪರಿಸರವಾದಿ ದಿನೇಶ್ ಹೊಳ್ಳ ಮಾತನಾಡಿ, ಪಶ್ಚಿಮ ಘಟ್ಟಗಳು ಈ ನಾಡಿನ ಅಕ್ಷಯ ನಿಧಿಗಳು ಅವುಗಳಿಂದಲೇ ಈ ನಾಡಿಗೆ ಸಕಲ ಅನುಕೂಲಗಳು. ಅವುಗಳ ನಾಶ ಎಂದರೆ ಅದು ನಾಡಿನ ಮತ್ತು ಸಕಲ ಪ್ರಾಣಿಗಳ ವಿನಾಶ.ವಿದ್ಯಾರ್ಥಿ ಸಮುದಾಯವು ಈ ನೆಲೆಯಲ್ಲಿ ಆಲೋಚಿಸಿ ಕಾರ್ಯತತ್ಪರರಾದಾಗ ಪಶ್ಚಿಮ ಘಟ್ಟಗಳನ್ನು ಉಳಿಸಿಕೊಳ್ಳಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ದಾಮೋದರ ಕಣಜಾಲು, ವಿದ್ಯಾರ್ಥಿಗಳಲ್ಲಿ ಪರಿಸರ ಕುರಿತಾದ ಜಾಗೃತ ಮನಸ್ಥಿತಿಯನ್ನು ರೂಪಿಸುವ ಸಲುವಾಗಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ವಿದ್ಯಾರ್ಥಿ ಸಮುದಾಯ ಮುಂದಿನ ತಲೆಮಾರಿನ ಋಣಸಂದಾಯ ಮಾಡಲು ಪರಿಸರ ಅರಿವು ಹೊಂದಿ ಪರಿಸರ ಸಂರಕ್ಷಣೆಯಲ್ಲಿ ತೊಡಗಿಕೊಳ್ಳುವುದು ಅವಶ್ಯ ಎಂದರು.
ಸಭೆಯಲ್ಲಿ ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷ ತೇಜಸ್ವಿ ಕಡಪಳ, ಕಾರ್ಯದರ್ಶಿ ಸಂಜಯ್ ನೆಟ್ಟಾರು ಮತ್ತು ಇತರ ಪದಾಧಿಕಾರಿಗಳು, ವಿದ್ಯಾರ್ಥಿ ಕ್ಷೇಮ ಪಾಲಕರಾದ ಕಾಂತರಾಜು ಸಿ. ಆಂತರಿಕ ಗುಣಮಟ್ಟ ಭರವಸಾ ಕೋಶದ ಸಹ ಸಂಚಾಲಕರಾದ ಡಾ.ರಾಮಚಂದ್ರ.ಕೆ ಹಾಗೂ ಉಪನ್ಯಾಸಕ ವೃಂದ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ಪ್ರಥಮ ಎಂಎಸ್ ಡಬ್ಲ್ಯೂ ವಿದ್ಯಾರ್ಥಿನಿ ಧನ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಪ್ರಥಮ ಎಂಎಸ್ ಡಬ್ಲ್ಯೂ ವಿದ್ಯಾರ್ಥಿನಿ ಪ್ರಜ್ಞಾ ಮತ್ತು ತಂಡ ಪ್ರಾರ್ಥಿಸಿದರು. ಪ್ರಥಮ ಎಂಕಾಂ ವಿದ್ಯಾರ್ಥಿನಿ ಪವಿತ್ರ ಬಿ ಸ್ವಾಗತಿಸಿ, ದ್ವಿತೀಯ ಎಂಕಾಂ ವಿದ್ಯಾರ್ಥಿ ಶ್ರವಣ್ ಕುಮಾರ್ ವಂದಿಸಿದರು.