ಪೆರುವಾಜೆ:ಪೆರುವಾಜೆಯ ಡಾ.ಕೆ ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ, 2022-23ನೇ ಸಾಲಿನ ಕಾಲೇಜು ವಾರ್ಷಿಕೋತ್ಸವ ಆಯೋಜಿಸಲಾಗಿತ್ತು. ತೂಗಸೇತುವೆಗಳ ಸರದಾರ ಎಂದೇ ಖ್ಯಾತರಾದ ಪದ್ಮಶ್ರೀ ಡಾ.ಗಿರೀಶ್ ಭಾರಧ್ವಾಜ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಎಲ್ಲರೂ ಸಮಾಜದಿಂದ ಪಡೆದ ಇನಿತು ಒಳಿತಿಗೆ ಮಹತ್ತರವಾದುದನ್ನು ಹಿಂತಿರುಗಿಸಬೇಕಾದುದು ಅನಿವಾರ್ಯ. ನಮ್ಮ ನಡುವೆ ಇರುವ ದ್ವೇಷದ
ಗೋಡೆಗಳನ್ನು ಕೆಡವಿ ಪ್ರೀತಿಯ ಸೇತುವೆಗಳನ್ನು, ನಂಬಿಕೆಯ ಸೇತುವೆಗಳನ್ನು, ಭರವಸೆಯ ಸೇತುವೆಗಳನ್ನು ನಿರ್ಮಿಸಬೇಕಿದೆ. ಹಾಗಾದಾಗ ಮಾತ್ರ ಭಾರತ ವಿಶ್ವದಲ್ಲಿ ಅದ್ವಿತೀಯ ಎನಿಸುತ್ತದೆ. ಮುಂದಿನ ಪೀಳಿಗೆಯ ವಿದ್ಯಾರ್ಥಿಗಳು ಈ ಕುರಿತು ಕಾರ್ಯತತ್ಪರತೆರಾಗಬೇಕೆಂದು ಆಶಿಸಿದರು..
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ದಾಮೋದರ ಕಣಜಾಲು ಮಾತನಾಡಿ ವಿದ್ಯಾರ್ಥಿ ಸಮುದಾಯವು ಪದ್ಮಶ್ರೀ ಗಿರೀಶ್ ಭಾರದ್ವಾಜರು ಹೇಳಿದ ಕಿವಿಮಾತುಗಳಿಗೆ ಕೇವಲ ಕಿವಿಯಾಗದೆ ಮನ ತೆರೆದು ಬಲಹೀನ ಸಮುದಾಯಗಳ ಸಬಲೀಕರಣದಲ್ಲಿ ತೊಡಗಬೇಕೆಂದರು.

ಕಾರ್ಯಕ್ರಮದಲ್ಲಿ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಅಣ್ಣಾಜಿ ಗೌಡ, ಕಾಲೇಜಿನ ಸಾಂಸ್ಕೃತಿಕ ವೇದಿಕೆಯ ಸಂಚಾಲಕರಾದ ಯತೀಶ್ ಕುಮಾರ್ ಎಂ, ವಿದ್ಯಾರ್ಥಿ ಕ್ಷೇಮ ಪಾಲಕರಾದ ಕಾಂತರಾಜು. ಕಾಲೇಜಿನ ಆಂ.ಗು.ಭ.ಕೋಶದ ಸಹ ಸಂಚಾಲಕರಾದ ಡಾ.ರಾಮಚಂದ್ರ ಕೆ. ಮತ್ತು ಬೋಧಕ-ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಕಾಲೇಜಿನ ಆಂ.ಗು.ಭ.ಕೋಶದ ಸಂಚಾಲಕರಾದ ಜ್ಯೋತಿ ಎಸ್ ನಿರೂಪಿಸಿದರು. ಪ್ರಥಮ ಸ್ನಾತಕೋತ್ತರ ವಿದ್ಯಾರ್ಥಿನಿ ಪ್ರಜ್ಞಾ ಮತ್ತು ವಿದ್ಯಾರ್ಥಿನಿಯರ ತಂಡ ಪ್ರಾರ್ಥಿಸಿದರು, ಕಾಂತರಾಜು. ಸಿ ಸ್ವಾಗತಿಸಿ, ಯತೀಶ್ ಕುಮಾರ್ ಎಂ ವಂದಿಸಿದರು.
ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ಮತ್ತು ಕಾಲೇಜಿನಲ್ಲಿ ಸ್ಥಾಪಿಸಲಾದ ದತ್ತಿನಿಧಿ ಸಹಾಯಧನಗಳನ್ನು ಅರ್ಹ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.