ಸುಳ್ಯ: ರಾಜ್ಯದ ವಿವಿಧ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಂದ ಇತರೆ ಕಾಲೇಜುಗಳಲ್ಲಿ ಅನ್ಯ ಕಾರ್ಯನಿಮಿತ್ತ ನಿಯೋಜನೆ ಮೇರೆಗೆ ಕಾರ್ಯ ನಿರ್ವಹಿಸುತ್ತಿರುವ ಪ್ರಭಾರ ಪ್ರಾಂಶುಪಾಲರನ್ನು ಮೂಲ ಕಾಲೇಜಿಗೆ ಹಿಂದಿರುಗುವಂತೆ ಕಾಲೇಜು ಶಿಕ್ಷಣ ಇಲಾಖೆ ಆದೇಶ ನೀಡಿದೆ.ಅದರಂತೆ
ಸುಳ್ಯ ತಾಲೂಕಿನ ಪೆರುವಾಜೆಯ ಬೆಳ್ಳಾರೆ ಡಾ.ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ದಾಮೋದರ ಕಣಜಾಲು ಅವರು ತಮ್ಮ ಮಾತೃ ಕಾಲೇಜಿಗೆ ಮರಳಲಿದ್ದಾರೆ. ಚಿಕ್ಕಮಗಳೂರಿನ ಸರಕಾರಿ ಮಹಿಳಾ ಕಾಲೇಜಿನ ರಾಜ್ಯ ಶಾಸ್ತ್ರ ಉಪನ್ಯಾಸಕರಾದ ದಾಮೋದರ ಕಣಜಾಲು ಅವರು ಒಂದು ವರ್ಷ 10 ತಿಂಗಳಿನಿಂದ ಪೆರುವಾಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಾಂಶುಪಾಲರ ಪ್ರಭಾರವನ್ನು ಆಯಾ ಕಾಲೇಜಿನ ಪ್ರಾಧ್ಯಾಪಕರು ಸಹ ಮತ್ತು ಸಹಾಯಕ ಪ್ರಾಧ್ಯಾಪಕರಿಗೆ ಪ್ರಭಾರ ವಹಿಸಿ ಬಿಡುಗಡೆಗೊಳ್ಳುವಂತೆ ಆದೇಶ ಮಾಡಲಾಗಿದೆ ಎಂದು ತಿಳಿದು ಬಂದಿದೆ.ಅದರಂತೆ ಕಣಜಾಲು ಅವರು ಚಿಕ್ಕಮಗಳೂರು ಸರಕಾರಿ ಮಹಿಳಾ ಕಾಲೇಜಿಗೆ ಕರ್ತವ್ಯಕ್ಕೆ ಹಿಂತಿರುಗಲಿದ್ದಾರೆ.