ಸುಳ್ಯ:ಸುಳ್ಯದಲ್ಲಿ ನಡೆಯುತ್ತಿರುವ ಪ್ರೊ ಮಾದರಿಯ ರಾಷ್ಟ್ರೀಯ ಕಬಡ್ಡಿ ಪಂದ್ಯಾಟದಲ್ಲಿ ತಡರಾತ್ರಿ ನಡೆದ 5ನೇ ಪಂದ್ಯದಲ್ಲಿ ತಮಿಳುನಾಡು ಈರೋಡಿನ ಪೆರಿಯಾರ್ ಸ್ಪೋರ್ಟ್ಸ್ ಎಎಂಕೆಸಿ ತಂಡ ಲೀಗ್ ಹಂತದ ತಮ್ಮ ಎರಡನೇ ಪಂದ್ಯದಲ್ಲಿ ಬಲಿಷ್ಠ ಇಎಸ್ಐ ದೆಹಲಿ ತಂಡವನ್ನು 32-22 ಅಂತರದಲ್ಲಿ
ಪರಾಭವಗೊಳಿಸಿತು. 6ನೇ ಪಂದ್ಯದಲ್ಲಿ ಆಳ್ವಾಸ್ ಮೂಡಬಿದ್ರೆ ತಂಡವು ಪಟ್ಲ ಫ್ರೆಂಡ್ಸ್ ಕಲ್ಲೇಗ ಮಂಗಳೂರು ತಂಡವನ್ನು 38-16 ಅಂಕದ ಅಂತರದಲ್ಲಿ ಪರಾಭವಗೊಳಿಸಿತು. ಭಾರೀ ಜಿದ್ದಾಜಿದ್ದಿನಿಂದ ಕೂಡಿದ 7ನೇ ಪಂದ್ಯದಲ್ಲಿ ಫ್ರಂಡ್ಸ್ ಕ್ಲಬ್ ಕಡಬ ತಂಡವು ಟಿಎಂಸಿ ಥಾಣೆ ತಂಡದ ವಿರುದ್ಧ 39-36 ಅಂತರದ ರೋಚಕ ಜಯ ಗಳಿಸಿತು. ಮೊದಲ ಅವಧಿಯಲ್ಲಿ ಟಿಎಂಸಿ ಥಾಣೆ ತಂಡ ಮುನ್ನಡೆ ಸಾಧಿಸಿತು. ದ್ವಿತೀಯಾರ್ಧದಲ್ಲಿ ರಾಷ್ಟ್ರೀಯ ಆಟಗಾರರನ್ನು ಒಳಗೊಂಡ ಎಫ್ಸಿ ಕಡಬ ತಂಡ ತಿರುಗಿ ಬಿದ್ದಿತು. ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸಿದ ರೋಚಕ ಪಂದ್ಯದಲ್ಲಿ ಅಂತಿಮವಾಗಿ ಕಡಬ ಗೆಲುವಿನ ನಗೆ ಬೀರಿತು.ಮೊದಲ ದಿನದ ಕೊನೆಯ ಪಂದ್ಯದಲ್ಲಿ ವೆಲಾಲಗರ್ ಪಾಂಡಿಚೇರಿ ತಂಡ ಗೆಲುವು ದಾಖಲಿಸಿತು. ಪಾಂಡಿಚೆರಿ ತಂಡ ಎನ್ಸಿಆರ್ ದೆಹಲಿ ತಂಡವನ್ನು 30-16 ಅಂಕಗಳ ಅಂತರದಲ್ಲಿ ಪರಾಭವಗೊಳಿಸಿತು. ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘ ಸುಳ್ಯ ಹಾಗೂ
ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಪಂದ್ಯಾಟ ಸಂಘಟನಾ ಸಮಿತಿಯ ಆಶ್ರಯದಲ್ಲಿ ರಾಷ್ಟ್ರೀಯ ಅಮೆಚೂರ್ ಕಬಡ್ಡಿ ಫೆಡರೇಷನ್ ಮತ್ತು ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ 3 ದಿನಗಳ ಪುರುಷರ ಮತ್ತು ಮಹಿಳೆಯರ ಪ್ರೊ ಮಾದರಿಯ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಚಾಂಪಿಯನ್ಶಿಪ್ ಸುಳ್ಯದ ಚೆನ್ನಕೇಶವ ದೇವಸ್ಥಾನದ ಸಮೀಪದ ಪ್ರಭು ಮೈದಾನದಲ್ಲಿ ವಿಶೇಷವಾಗಿ ತಯಾರಿಸಲಾದ ಇಂಡೋರ್ ಸ್ಟೇಡಿಯಂನ ಮ್ಯಾಟ್ ಅಂಕಣದಲ್ಲಿ ನಡೆಯುತಿದೆ.









