ಪೆರಾಜೆ:ಕರ್ನಾಟಕ ರಾಜ್ಯ ರೈತ ಸಂಘದ ಪೆರಾಜೆ ಗ್ರಾಮ ಘಟಕದ ಆಶ್ರಯದಲ್ಲಿ ‘ಅಡಿಕೆ ಎಲೆ ಹಳದಿ ರೋಗ ಮತ್ತು ಪೋಷಕಾಂಶಗಳ ನಿರ್ವಹಣೆ ಕುರಿತಾಗಿ’ ಮತ್ತು ಹಳದಿ ರೋಗದ ಬಗ್ಗೆ ಸ್ವಯಂ ಘೋಷಿತ ಅರ್ಜಿ ವಿತರಣಾ ಕಾರ್ಯಕ್ರಮ ಪೆರಾಜೆಯ ಶ್ರೀ ಅನ್ನಪೂರ್ಣೇಶ್ವರಿ ಕಲಾಮಂದಿರದಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಸಿಪಿಸಿಆರ್ ಐ ವಿಜ್ಞಾನಿ ಡಾ. ಭವಿಷ್ಯ ಅವರು ಮಾಹಿತಿ ನೀಡಿದರು. ಅಡಿಕೆ ಗಿಡಗಳಿಗೆ ತಗುಲಿರುವ
ಈ ರೋಗ ಮಾರಕವಾಗಿದ್ದು ಇದರ ತಡೆಗಟ್ಟುವ ನೆರೆಯಲ್ಲಿ ನಡೆಯುತ್ತಿರುವ ಸಂಶೋಧನೆಗಳ ಕುರಿತಾಗಿ ಅವರು ಮಾಹಿತಿ ನೀಡಿದರು. ರೈತರು ತಮ್ಮ ತೋಟಗಳಿಗೆ ಸರಿಯಾದ ಕ್ರಮದಲ್ಲಿ ಪೋಷಕಾಂಶಗಳ ಒದಗಿಸುವ ಮತ್ತು ತೋಟಗಳ ತೇವಾಂಶವನ್ನು ನಿರ್ವಹಿಸುವ ಅಗತ್ಯತೆಗಳ ಬಗ್ಗೆ ಒತ್ತಿ ಹೇಳಿದರು. ಬಳಿಕ ನಡೆದ ಸಂವಾದದಲ್ಲಿ ರೈತರು ಕೇಳಿದ ವಿವಿಧ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ರೈತ ಸಂಘದ ಗೌರವಾಧ್ಯಕ್ಷ ಹರಿಶ್ಚಂದ್ರ ಮುಡ್ಕಜೆ ಚಾಲನೆ ನೀಡಿದರು. ಬಳಿಕ ನಡೆದ ಸಂವಾದ ಕಾರ್ಯಕ್ರಮವನ್ನು ಸಂಘದ ಉಪಾಧ್ಯಕ್ಷ ಗೋಪಾಲ ಪೆರಾಜೆ ನಿರ್ವಹಿಸಿದರು. ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಎನ್ ಪಿ ಬಾಲಕೃಷ್ಣ, ಪರಾಜೆ ಅನ್ನಪೂರ್ಣೇಶ್ವರಿ ಕಲಾಮಂದಿರದ ಮಾಲಕ ರಮೇಶ್ ಶೆಟ್ಟಿ, ಸುಳ್ಯ ತಾಲೂಕಿನ ರೈತ ಸಂಘದ ಕಾರ್ಯದರ್ಶಿ ಭರತ್ ಕುಮಾರ್ ಉಪಸ್ಥಿತರಿದ್ದರು. ಸಂವಾದ ಕಾರ್ಯಕ್ರಮದಲ್ಲಿ ಉಮೇಶ ಕುಂಬಳಚೇರಿ, ನೆಕ್ಕಿಲ ಗಂಗಾಧರ, ಹೊದ್ದಟ್ಟಿ ಚಿದಾನಂದ, ಬಂಗಾರ ಕೋಡಿ ವಿಶ್ವನಾಥ, ವೇಣುಗೋಪಾಲ ಕುಂದಲಪಾಡಿ, ವೇದವ್ಯಾಸ, ಕತ್ತಲಡ್ಕ ಸಂಜೀವ,ಭರತ ಅಮಚೂರು, ಜಗದೀಶ ಕುಂಬಳಕೇರಿ ಮತ್ತಿತರರು ಸಂವಾದದಲ್ಲಿ ಪಾಲ್ಗೊಂಡರು. ಅಶೋಕ ಪೀಚೆ ಸ್ವಾಗತಿಸಿ,
ಸಂಘದ ಕಾರ್ಯದರ್ಶಿ ಪುರುಷೋತ್ತಮ ಬಂಗಾರ ಕೋಡಿ ವಂದಿಸಿದರು.