ಸುಳ್ಯ:ಪೆರಾಜೆ ಶ್ರೀಶಾಸ್ತಾವು ದೇವಸ್ಥಾನದಲ್ಲಿ ಇಂದು ಶ್ರೀಭಗವತಿಯ ದೊಡ್ಡಮುಡಿ ವೈಭವ. ದೊಡ್ಡಮುಡಿಯ ವೈಭವದ ದರ್ಶನ ಪಡೆಯಲು ಕೇರಳ, ಕರ್ನಾಟಕ ರಾಜ್ಯಗಳಿಂದ ಸಾವಿರಾರು ಭಕ್ತರ ಗಡಣವೇ ಆಗಮಿಸಲಿದ್ದಾರೆ. ಸುಮಾರು 30 ಅಡಿಗಳಿಗಿಂತಲೂ ಎತ್ತರದ ವೈವಿಧ್ಯಮಯ ಅಲಂಕಾರಗಳಿಂದ ಕೂಡಿದ ಭಗವತಿಯ ಮುಡಿ ಇಲ್ಲಿನ ವಿಶೇಷತೆ.30 ಅಡಿ ಎತ್ತರದ ತೆಳ್ಳಗೆ ಸಿಗಿದ ಬಿದಿರಿನ ಸಲಾಕೆಗಳಿಂದ
ಗೋಪುರಾಕಾರ ನಿರ್ಮಿಸಿ, ಅದಕ್ಕೆ ಕೆಂಪು ಬಣ್ಣದ ಬಟ್ಟೆ ಸುತ್ತಿ, ಹೂವುಗಳಿಂದ ಸಿಂಗರಿಸಿದ ಮುಡಿಯ ವೈಭವವನ್ನು ಭಕ್ತರು ಕಣ್ತುಂಬಿ ಕೊಳ್ಳಲಿದ್ದಾರೆ.ಸಂಜೆ 4 ಗಂಟೆಗೆ ದೊಡ್ಡಮುಡಿ ಹೊತ್ತ ಭಗವತಿ ಹೊರಡಲಿದೆ. ಪೆರಾಜೆಯಲ್ಲಿ ಮೂಲ ದೇವರಾಗಿ ಧರ್ಮಶಾಸ್ತಾರನ ಆರಾಧನೆ ಮಾಡಲಾಗುತ್ತದೆ. ಪಾರ್ವತಿಯ ರೂಪವಾಗಿ ಭಗವತಿ ದೇವಿಯನ್ನು ಆರಾಧಿಸಲಾಗುತ್ತದೆ. ಭೂತರಾಧನೆಗೆ ಪ್ರಸಿದ್ಧಿ ಪಡೆದ ಈ ಕ್ಷೇತ್ರದಲ್ಲಿ ಭಗವತಿ ಹಾಗು ವಿವಿಧ ದೈವಗಳ ಭೂತ ಕೋಲಗಳನ್ನು ಕಟ್ಟಿ ಆಡಿಸಲಾಗುತ್ತದೆ.
ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನ ಪೆರಾಜೆಯಲ್ಲಿ ಮಾ.9ರಿಂದ ಕಾಲಾವಧಿ ಜಾತ್ರೋತ್ಸವ ಪ್ರಾರಂಭಗೊಂಡಿದ್ದು, ಏ.10ರವರೆಗೆ ನಡೆಯಲಿದೆ. ಪ್ರತಿವರ್ಷ ಏ.1ರಂದು ನಡೆಯುವ ಭಗವತಿಯ ದೊಡ್ಡಮುಡಿ ಇಲ್ಲಿನ ಪ್ರಮುಖ ಆಕರ್ಷಣೆ.ಏ.1ರಂದು ಬೆಳಿಗ್ಗೆ 6 ರಿಂದ ಪೊಟ್ಟನ್ ದೈವ, ರಕ್ತೇಶ್ವರಿ, ಆಯರ್ ಭಗವತಿ, ಪುಲ್ಲೂರು ಕಾಳಿ, ಪುಲ್ಲೂರು ಕಣ್ಣನ್, ವಿಷ್ಣುಮೂರ್ತಿ, ಬೇಟೆ ಕರಿಮಗನ್ ಈಶ್ವರನ್ ದೈವಗಳ ಕೋಲಗಳು ನಡೆದು ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ ನಡೆದು ಅಪರಾಹ್ನ ಗಂಟೆ 4 ಕ್ಕೆ ಶ್ರೀ ಭಗವತಿ ದೊಡ್ಡಮುಡಿ ನಡೆಯಲಿದೆ.
ಮಾ.31ರಂದು ಹಗಲು ಕಾಳ ಪುಲಿಯನ್ ಮತ್ತು ಪುಲಿಕಂಡನ್ ದೈವಗಳು, ಬೇಟೆ ಕರಿಮಗನ್ ಈಶ್ವರನ್ ದೈವ ನಡೆಯಿತು. ರಾತ್ರಿ ಭಗವತಿ ದೇವಿ ಸಮಾರಾಧನೆ, ಪುಲ್ಲೂರ್ ಕಣ್ಣನ್ ಬೆಳ್ಳಾಟ 1, ತುಳು ಕೋಲಗಳು ಬೆಳ್ಳಾಟ 1 ಮಲೆಕಾರಿ ಬೆಳ್ಳಾಟ 1, ವಿಷ್ಣುಮೂರ್ತಿ ತೊಡಙಲ್, ರಕೇಶ್ವರಿ ತೊಡಂಙಲ್, ಪೊಟ್ಟನ್ ದೈವದ ತೊಡಂಙಲ್ ಬೇಟೆ ಕರಿಮಗನ್ ಬೆಳ್ಳಾಟ ನಡೆಯಿತು. ಭಗವತಿ ಕಲಶ ಆಗಮಿಸಿ, ಭಗವತಿ ತೋಟ್ಟಂ, ಆಯರ್ ಭಗವತಿ ತೋಟ್ಟಂ, ಪುಲ್ಲೂರುಕಾಳಿ ತೋಟ್ಟಂ,ತುಳುಕೋಲ ಮತ್ತು ಮಲೆಕ್ಕಾರಿ ತಿರುವಪ್ಪಗಳು ನಡೆಯಿತು.
ದೇವಸ್ಥಾನದ ಆಡಳಿತ ಮೊಕ್ತೇಸರರಾದ ಜಿತೇಂದ್ರ ನಿಡ್ಯಮಲೆ, ಆಡಳಿತ ಕಾರ್ಯದರ್ಶಿ ತೇಜಪ್ರಸಾದ್ ಅಮಚೂರು,ಸಹ ಕಾರ್ಯದರ್ಶಿ, ಚಿನ್ನಪ್ಪ ಅಡ್ಕ, ದೇವತಕ್ಕರಾದ ರಾಜಗೋಪಾಲ ರಾಮಕಜೆ ತಕ್ಕ ಮುಖ್ಯಸ್ಥರಾದ
ಭಾಸ್ಕರ ಕೋಡಿ, ವಿಶ್ವನಾಥ ಮೂಲೆಮಜಲು, ಪ್ರಭಾಕರ ಕೋಡಿ, ಗಣಪತಿ ಕುಂಬಳಚೇರಿ ಪುರುಷೋತ್ತಮ ನಿಡ್ಯಮಲೆ.
ಆಡಳಿತ ಸಮಿತಿ ಸದಸ್ಯರುಗಳು, ಅರ್ಚಕ ವೃಂದ ಮತ್ತು ಸಿಬ್ಬಂದಿವರ್ಗ ಹಾಗೂ ಊರ ಭಗವದ್ಭಕ್ತರು ಇದ್ದರು.