ಪೇರಡ್ಕ:ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಅತ್ಯಂತ ಪುರಾತನ ಮತ್ತು ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಪೇರಡ್ಕ ಗೂನಡ್ಕ ದರ್ಗಾ ಶರೀಫಿನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಮಹಾನುಭಾವರ ಹೆಸರಿನಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಇತಿಹಾಸ ಪ್ರಸಿದ್ಧ ಉರೂಸ್ ಕಾರ್ಯಕ್ರಮ ಜನವರಿ 9ರ ಇಂದು ಚಾಲನೆಗೊಳ್ಳಲಿದೆ. ಹರಿದ್ವರ್ಣ ಕಾಡು, ಪ್ರಶಾಂತವಾಗಿ
ಹರಿಯುವ ನದಿ, ತೆಂಗು ಕಂಗು ತೋಟಗಳು, ಗದ್ದೆಗಳು ಸೇರಿದಂತೆ ಪ್ರಕೃತಿ ಸೌಂದರ್ಯದ ನೆಲೆವೀಡಾದ ಪೇರಡ್ಕ ಎಂಬ ಪುಟ್ಟ ಹಳ್ಳಿ ಇಂದು ಸಹಸ್ರಾರು ಮಂದಿಗೆ ಅಭಯ ಕೇಂದ್ರವಾಗಿ ಮಾರ್ಪಟ್ಟಿರುವುದರ ಹಿಂದಿನ ರಹಸ್ಯ ಅಲ್ಲಿನ ಮಹಾನುಭಾವರಾಗಿದ್ದಾರೆ. ಸರ್ವಧರ್ಮೀಯರಿಂದಲೂ ಸಮಾನವಾಗಿ ಗೌರವಿಸಲ್ಪಡುವ ಜಾತಿ ಧರ್ಮ ಭೇದವಿಲ್ಲದೆ ಎಲ್ಲರಿಗೂ ಸಾಂತ್ವನ ಶಕ್ತಿಯಾಗಿ ಗುರುತಿಸಲ್ಪಡುವ ಈ ಸಾತ್ವಿಕರ ಹೆಸರಿನಲ್ಲಿ ವರ್ಷಂಪ್ರತಿ ವಿಜೃಂಭಣೆಯಿಂದ ಉರೂಸ್ ಕಾರ್ಯಕ್ರಮ ಆಯೋಜಿಸಲಾಗುತ್ತದೆ.

ಎಂದಿನಂತೆ ಈ ಬಾರಿಯೂ ಉರೂಸ್ ಕಾರ್ಯಕ್ರಮದ ಭಾಗವಾಗಿ ತ್ರಿದಿನ ಧಾರ್ಮಿಕ ಉಪನ್ಯಾಸ, ಝಿಯಾರತ್, ದಫ್ ಪ್ರದರ್ಶನ ಮತ್ತು ಅನ್ನದಾನ ನಡೆಯಲಿದೆ. ಇಲ್ಲಿನ ಮಹಾನುಭಾವರ ಪವಾಡಗಳ ಫಲಾನುಭವಿಗಳಾದ ಸಹಸ್ರಾರು ಮಂದಿ ಈ ಮೂರು ದಿನಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ವಿಶೇಷವಾಗಿ ಸಾಮರಸ್ಯತೆ ಮತ್ತು ಸಹಬಾಳ್ವೆಯ ಸಂದೇಶ ಸಾರುವ ಸರ್ವಧರ್ಮ ಸೌಹಾರ್ದ ಸಮಾವೇಶ ಸಮಾರೋಪ ಕಾರ್ಯಕ್ರಮದ ದಿನದಂದು ನಡೆಯಲಿದೆ.

ಸಯ್ಯಿದರು, ಪ್ರಖ್ಯಾತ ಧಾರ್ಮಿಕ ವಿದ್ವಾಂಸರು, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ರಾಜಕೀಯ ರಂಗದ ಹಲವಾರು ಪ್ರಮುಖರು ಭಾಗವಹಿಸಲಿದ್ದು, ಪೇರಡ್ಕ ಜಮಾಅತಿನ ಘನ ಅಧ್ಯಕ್ಷ ಟಿ ಎಂ ಶಹೀದ್ ತೆಕ್ಕಿಲ್ ಅವರು ಧ್ವಜಾರೋಹಣ ನೆರವೇರಿಸುವುದರೊಂದಿಗೆ ವಿದ್ಯುಕ್ತವಾಗಿ ಪ್ರಾರಂಭಗೊಂಡು ದುಗಲಡ್ಕ ತಂಙಳ್ ಅವರ ಪ್ರಾರ್ಥನೆಯೊಂದಿಗೆ ಜನವರಿ 11 ರಂದು ಸಮಾಪ್ತಿಗೊಳ್ಳಲಿದೆ. ಪ್ರತಿದಿನವೂ ಅನ್ನದಾನ ವ್ಯವಸ್ಥೆ ಏರ್ಪಡಿಸಲಾಗಿದ್ದು, ಸಮಾರೋಪ ಪ್ರಾರ್ಥನೆಯ ಬಳಿಕ ಬೃಹತ್ ತಬರ್ರುಕ್ ವಿತರಣೆ ನಡೆಯಲಿದೆ.
ಬರಹ:ಅಹಮ್ಮದ್ ನಈಂ ಫೈಝಿ. ಬತೀಬರು. ಪೇರಡ್ಕ ಎಂ.ಜೆ.ಎಂ.












